ಆಯ್ದ ರೈಲ್ವೇ ನಿಲ್ದಾಣಗಳಿಂದ ಪ್ರಯಾಣ ಮಾಡುವ ರೈಲ್ವೇ ಪ್ರಯಾಣಿಕರಿಗೆ ಇನ್ಮುಂದೆ ರೈಲು ಪ್ರಯಾಣ ದುಬಾರಿಯಾಗಲಿದೆ. ಅಭಿವೃದ್ಧಿ ಪಡಿಸಿದ ಅಥವಾ ಮುಂದೆ ಅಭಿವೃದ್ಧಿಪಡಿಸಲಿರುವ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರಿಂದ ರೈಲ್ವೆ ಮಂಡಳಿಯು ನಿಲ್ದಾಣ ಅಭಿವೃದ್ಧಿ ಶುಲ್ಕ (SDF) ಅಥವಾ ಬಳಕೆದಾರ ಶುಲ್ಕವನ್ನು ಪಡೆಯಲು ಅನುಮೋದನೆ ನೀಡಿದೆ. ಈ ನಿಲ್ದಾಣಗಳಲ್ಲಿ ರೈಲುಗಳನ್ನು ಡಿ-ಬೋರ್ಡಿಂಗ್ ಮಾಡಲು ಇದೇ ರೀತಿಯ ಶುಲ್ಕವನ್ನು ವಿಧಿಸಲಾಗುತ್ತದೆ.
ವಿಮಾನ ಟಿಕೆಟ್‌ಗಳ ಬುಕಿಂಗ್‌ನಲ್ಲಿ ಮಾಡುವಂತೆ, ರೈಲ್ವೇ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಅಥವಾ ಕೊಳ್ಳುವಾಗ ಈ ಶುಲ್ಕವನ್ನ ಟಿಕೆಟ್ ನ ದರಕ್ಕೆ ಸೇರಿಸಲಾಗುತ್ತದೆ. 10 ರಿಂದ 50 ರೂಪಾಯಿಯೊಳಗೆ ಶುಲ್ಕ ಇರಲಿದ್ದು, ಪ್ರಯಾಣಿಸುವ ವಿಭಾಗಕ್ಕೆ ತಕ್ಕಂತೆ ಸೇರಿಸಲಾಗುತ್ತದೆ. ಎಸಿ ಕೋಚ್ ಗಳಿಗೆ 50 ರೂ., ಸ್ಲೀಪರ್ ಕ್ಲಾಸ್‌ಗೆ 25 ರೂ., ಕಾಯ್ದಿರಿಸದ ಮತ್ತು ಸಾಮಾನ್ಯ ವರ್ಗಕ್ಕೆ ಕನಿಷ್ಠ 10 ರೂ. ಶುಲ್ಕವನ್ನ ಟಿಕೆಟ್ ದರಕ್ಕೆ ಸೇರಿಸಲಾಗುತ್ತದೆ. ಸ್ಥಳೀಯ ಅಥವಾ ಸಬ್ ಅರ್ಬನ್ ರೈಲು ಪ್ರಯಾಣಕ್ಕೆ ಇಂತಹ ಯಾವುದೇ ಶುಲ್ಕ ಇರುವುದಿಲ್ಲ. ಅಧಿಸೂಚನೆಯ ಪ್ರಕಾರ, ವಲಯ ರೈಲ್ವೇಯ ಸ್ಟೇಷನ್ ಡೆವಲಪ್‌ಮೆಂಟ್ ಯೂನಿಟ್ ಈ ಶುಲ್ಕ ಜಾರಿಯಾಗುವ 120 ದಿನಗಳ ಮುಂಚೆಯೆ ವಾಣಿಜ್ಯ ನಿಲ್ದಾಣಗಳಿಗೆ ಈ ಬಗ್ಗೆ ತಿಳಿಸುತ್ತದೆ. ಈ ನಿಲ್ದಾಣಗಳಲ್ಲಿನ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಸಹ 10 ರೂಪಾಯಿಗಳಷ್ಟು ದುಬಾರಿಯಾಗುತ್ತವೆ.
ರೈಲ್ವೆ ಮಂಡಳಿಯು ಡಿಸೆಂಬರ್ 31 ರಂದು ಈ ಹೊಸ ನಿಯಮವನ್ನ ಸೂಚಿಸಿದ್ದು, ಇದರಿಂದ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಖಾಸಗಿ ಕಂಪನಿಗಳಿಗೆ ಖಚಿತವಾದ ಆದಾಯದ ಮೂಲ ಸಿಕ್ಕಂತಾಗುತ್ತದೆ. ಇದು ಖಾಸಗಿ ಕಂಪನಿಯವರು ಬಿಡ್ ಮಾಡಲು ಪ್ರೋತ್ಸಾಹಿಸುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.
ಬಳಕೆದಾರರ ಶುಲ್ಕವನ್ನು ವಿಧಿಸುವುದರಿಂದ ರೈಲು ಪ್ರಯಾಣ ದರವು ಹೆಚ್ಚಾಗುತ್ತದೆ ಎಂದರ್ಥ. ಉದಾಹರಣೆಗೆ, ಪ್ರಯಾಣಿಕರು ನವದೆಹಲಿಯಿಂದ ಮುಂಬೈಗೆ ಟಿಕೆಟ್ ಬುಕ್ ಮಾಡಿದರೆ, ಟಿಕೆಟ್ ದರವು ಎರಡೂ ನಿಲ್ದಾಣಗಳ ಬಳಕೆದಾರರ ಶುಲ್ಕವನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಪ್ರಯಾಣಿಕರು ಚಿಕ್ಕ ನಿಲ್ದಾಣದಿಂದ ಹೊಸ ದೆಹಲಿ ಅಥವಾ ಮುಂಬೈಗೆ ಟಿಕೆಟ್ ಬುಕ್ ಮಾಡಿದರೆ, ಬಳಕೆದಾರರ ಶುಲ್ಕವು ಸಾಮಾನ್ಯ ಶುಲ್ಕದ 50% ಆಗಿರುತ್ತದೆ. ಮೂಲಗಳ ಪ್ರಕಾರ, ಪ್ರಾರಂಭಿಕ ಹಂತದಲ್ಲಿ ಆಯ್ದ 50 ನಿಲ್ದಾಣಗಳಲ್ಲಿ ಬಳಕೆದಾರರ ಶುಲ್ಕದ ಆಡಳಿತವನ್ನು ಹೊರತರಬಹುದು, ಆನಂತರ ಇನ್ನುಳಿದ ನಿಲ್ದಾಣಗಳಿಗೆ ವಿಸ್ತರಿಸುವುದು ರೈಲ್ವೇ ಇಲಾಖೆಯ ಪ್ಪ್ಯಾನ್.