ಪ್ರಯಾಗ್ರಾಜ್ನಲ್ಲಿ ಮುಕ್ತಾಯಗೊಂಡ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ ಕೋಟ್ಯಂತರ ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಅದ್ಭುತ ಸೇವೆ ನೀಡಿದೆ. 10,000 ಕ್ಕೂ ಹೆಚ್ಚು ರೈಲ್ವೆ ಕಾರ್ಮಿಕರ ಶ್ರಮವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶ್ಲಾಘಿಸಿದ್ದಾರೆ.
ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗ್ರಾಜ್ನ ಒಂಬತ್ತು ನಿಲ್ದಾಣಗಳಲ್ಲಿ ಸುಮಾರು 17,000 ರೈಲುಗಳು ಕೋಟ್ಯಾಂತರ ಪ್ರಯಾಣಿಕರನ್ನು ತಲುಪಿಸಿವೆ. ಗುರುವಾರ ಪ್ರಯಾಗ್ರಾಜ್ ನಿಲ್ದಾಣಕ್ಕೆ ಭೇಟಿ ನೀಡಿದ ವೈಷ್ಣವ್, ರೈಲ್ವೆ ಸಿಬ್ಬಂದಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು.
ಎಲ್ಲಾ ನೌಕರರಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ವೈಷ್ಣವ್, “ಇದು ನಮ್ಮ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಏಕತೆಯ ಸಂದೇಶವಾಗಿದೆ. 16,000 ಕ್ಕೂ ಹೆಚ್ಚು ರೈಲುಗಳನ್ನು ನಿರ್ವಹಿಸುವ ಮೂಲಕ, ಸುಮಾರು ಕೋಟ್ಯಾಂತರ ಭಕ್ತರನ್ನು ಸಂಗಮ ದರ್ಶನಕ್ಕಾಗಿ ರೈಲ್ವೆ ಮೂಲಕ ಸಾಗಿಸಲಾಗಿದೆ. ನಾವು ಎರಡೂವರೆ ವರ್ಷಗಳ ಹಿಂದೆ ಕೆಲಸವನ್ನು ಪ್ರಾರಂಭಿಸಿದ್ದೇವು ಮತ್ತು ಸುಮಾರು 5,000 ಕೋಟಿ ರೂ. ಹೂಡಿಕೆ ಮಾಡಿದ್ದೇವೆ” ಎಂದು ಹೇಳಿದರು.
ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, “ಒಟ್ಟು 16,870 ರೈಲುಗಳನ್ನು ಓಡಿಸಲಾಯಿತು, ಮೂಲತಃ ಯೋಜಿಸಿದ 13,000 ರೈಲುಗಳನ್ನು ಮೀರಿಸಿದೆ. ಕಳೆದ ಕುಂಭ (2019) ಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇದರಲ್ಲಿ 7,327 ವಿಶೇಷ ರೈಲುಗಳು ಮತ್ತು 9,543 ಸಾಮಾನ್ಯ ರೈಲುಗಳು ಸೇರಿವೆ” ಎಂದು ಹೇಳಿದರು.
“ಪೀಕ್-ಅವರ್ ದಟ್ಟಣೆಯನ್ನು ನಿರ್ವಹಿಸಲು, 23 ಶಾಶ್ವತ ಹೋಲ್ಡಿಂಗ್ ಪ್ರದೇಶಗಳನ್ನು ಸ್ಥಾಪಿಸಲಾಯಿತು. 151 ಮೊಬೈಲ್ ಅನ್ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ ಕೌಂಟರ್ಗಳು ಮತ್ತು ಕ್ಯೂಆರ್-ಆಧಾರಿತ ವ್ಯವಸ್ಥೆ ಸೇರಿದಂತೆ 554 ಕೌಂಟರ್ಗಳೊಂದಿಗೆ ಟಿಕೆಟಿಂಗ್ ಸೌಲಭ್ಯಗಳನ್ನು ವಿಸ್ತರಿಸಲಾಯಿತು” ಎಂದು ಅಧಿಕಾರಿ ತಿಳಿಸಿದರು.
ಕುಂಭಮೇಳದಲ್ಲಿ ರೈಲ್ವೆ ಇಲಾಖೆ ನೀಡಿದ ಅದ್ಭುತ ಸೇವೆಯಿಂದಾಗಿ ಕೋಟ್ಯಂತರ ಭಕ್ತರು ಸುಲಭವಾಗಿ ಪ್ರಯಾಣಿಸಿ ದರ್ಶನ ಪಡೆದರು.