ತಮಿಳುನಾಡಿನ ಮಹಾದಾನಪುರಂ ರೈಲ್ವೇ ನಿಲ್ದಾಣದಲ್ಲಿ, ಸೆಪ್ಟೆಂಬರ್ 27, 2014ರಲ್ಲಿ, ವ್ಯಕ್ತಿಯೊಬ್ಬರ ಮೇಲೆ ರೈಲು ಹರಿದ ಪರಿಣಾಮ ಅವರ ಶಿರಚ್ಛೇದನಗೊಂಡ ಸಂಬಂಧ, ಮೃತರ ಮಡದಿಗೆ ಪರಿಹಾರವಾಗಿ ಎಂಟು ಲಕ್ಷ ರೂ. ಗಳನ್ನು ಕೊಡುವಂತೆ ಭಾರತೀಯ ರೈಲ್ವೇಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈ ಸಂಬಂಧ ಕಾಮುಕಾಯಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸೂರ್ಯ ಕಾಂತ್ ಹಾಗೂ ಜೆಕೆ ಮಹೇಶ್ವರಿ ಇದ್ದ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ವಜಾಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಹಾಗೂ ರೈಲ್ವೇ ನ್ಯಾಯಮಂಡಳಿಯ ಆದೇಶಗಳನ್ನು ಬದಿಗೆ ಸರಿಸಿದೆ.
ಮೃತರು ರೈಲು ಪ್ರಯಾಣಿಕರಲ್ಲದ ಕಾರಣ, ಹಾಗೂ ಅವರ ಬಳಿ ಸೂಕ್ತವಾದ ಟಿಕೆಟ್ ಸಹ ಇಲ್ಲದೇ ಇದ್ದಿದ್ದರಿಂದ ಅವರ ಕುಟುಂಬಕ್ಕೆ ಪರಿಹಾರ ನೀಡಲು ಬಾರದು ಎಂದು ರೈಲ್ವೇ ಅಧಿಕಾರಿಗಳು ವಾದಿಸಿದ್ದರು.
ಟಿಕೆಟ್ ಇಲ್ಲವೆಂಬ ಕಾರಣಕ್ಕೆ ಗಾಯಗೊಂಡ ಅಥವಾ ಮೃತಪಟ್ಟ ವ್ಯಕ್ತಿಯನ್ನು ಪ್ರಯಾಣಿಕ ಎಂದು ಪರಿಗಣಿಸದಿರಲು ಬಾರದು ಎಂದು ಹೇಳಲಾಗಿದ್ದು ಕಮ್ರುನ್ನಿಸಾ ವರ್ಸಸ್ ಭಾರತ ಸರ್ಕಾರ (2019) ಪ್ರಕರಣದ ತೀರ್ಪನ್ನು ನೆನಪಿಸಿದ ಸುಪ್ರೀಂ, ಪ್ರಕರಣವನ್ನು ಸಾಬೀತು ಪಡಿಸುವ ಆರಂಭಿಕ ಹೊರೆ ಕ್ಲೇಮೆಂಟ್‌ಗಳಿಗಿದ್ದು, ಅವರು ಅಫಿಡವಿಟ್ ಹಾಗೂ ಸೂಕ್ತ ಮಾಹಿತಿಗಳನ್ನು ಒದಗಿಸಿದ ಬಳಿಕ ಈ ಹೊರೆ ರೈಲ್ವೇ ಇಲಾಖೆ ಮೇಲೆ ಸ್ಥಳಾಂತರಗೊಳ್ಳಲಿದ್ದು, ಘಟನೆ ವೇಳೆಯ ವಾಸ್ತವಾಂಶಗಳ ಆಧಾರದ ಮೇಲೆ ತೀರ್ಪು ನೀಡಲಾಗುವುದು ಎಂದು ತಿಳಿಸಿದೆ.
ಮೃತಪಟ್ಟ ಮುತ್ತುಸ್ವಾಮಿ ತಮ್ಮ ಪ್ರಯಾಣಿಕನಾಗಿರಲಿಲ್ಲ ಎಂದು ಸಾಬೀತುಪಡಿಸಲು ರೈಲ್ವೇ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದ ಕಾರಣ, ರೈಲ್ವೇ ಅಫಘಾತಗಳು ಹಾಗೂ ಅಹಿತಕರ ಘಟನೆಗಳು (ಪರಿಹಾರ) ನಿಯಮಗಳು, 1990ರ ಸೆಕ್ಷನ್ 124ಎ ಅಡಿಯಲ್ಲಿ ಮೃತರ ಕುಟುಂಬಕ್ಕೆ ಎಂಟು ಲಕ್ಷ ರೂ. ಪರಿಹಾರ ನೀಡಲು ರೈಲ್ವೇ ಇಲಾಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.