ನವದೆಹಲಿ: ಅಮೃತಶಿಲೆಯ ಪುಡಿಯನ್ನು ಆಲಂ ಪುಡಿಯೆಂದು ಹೇಳಿ ದೇಶದ ವಿವಿಧೆಡೆ ಸಾಗಿಸಿದಲ್ಲದೆ, 5.13 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ರೈಲ್ವೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ, ಜೈಪುರ ಮೂಲದ ಖಾಸಗಿ ಸಂಸ್ಥೆ ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ರಾಜಸ್ಥಾನದ ಮಂಡಲ್‌ಗಢ್ ರೈಲು ನಿಲ್ದಾಣದಿಂದ (ಡಬ್ಲ್ಯುಸಿಆರ್) ವಿವಿಧ ಸ್ಥಳಗಳಿಗೆ ಮಾರ್ಬಲ್ ಪೌಡರ್ ಅನ್ನು ರೈಲ್ವೇ ಲೋಡ್ ಮಾಡಿ ಸಾಗಿಸಿತು. ಇದನ್ನು ಆಲಂ ಪುಡಿಯೆಂದು ಹೇಳಿ ಮರೆಮಾಚಿತು. ಹೀಗಾಗಿ ಭಾರತೀಯ ರೈಲ್ವೇಗೆ ಭಾರಿ ನಷ್ಟ ಉಂಟಾಗಿದೆ.
ವಿಚಾರಣೆಯ ಸಮಯದಲ್ಲಿ, ಗುವಾಹಟಿಯ ವಿನಾಯಕ್ ಲಾಜಿಸ್ಟಿಕ್ಸ್ ಮತ್ತು ಗುವಾಹಟಿಯ ವಿನಾಯಕ್ ಲಾಜಿಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅದರ ನಿರ್ದೇಶಕ ಪ್ರವೇಶ್ ಕಬ್ರಾ ಜೊತೆಗೆ ಅಪರಿಚಿತ ರೈಲ್ವೆ ಅಧಿಕಾರಿಗಳೊಂದಿಗೆ ಸೇರಿಕೊಂಡು ರೈಲ್ವೆಗೆ ವಂಚಿಸಲು ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಅಪರಿಚಿತ ರೈಲ್ವೇ ಅಧಿಕಾರಿಗಳು, ತಮ್ಮ ಅಧಿಕೃತ ಸ್ಥಾನಗಳನ್ನು ದುರುಪಯೋಗಪಡಿಸಿಕೊಂಡು, ಸರಕುಗಳ ತಪ್ಪು ಘೋಷಣೆಗೆ ಅನುಮತಿ ನೀಡಿದರು. ಸಂಸ್ಥೆಗಳಿಂದ ಆಲಂ ಪೌಡರ್ ಎಂದು ಲೇಬಲ್ ಮಾಡಿದರು. ಕಥುವಾ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ಸ್ಥಳಗಳಿಗೆ 20 ರೇಕ್‌ಗಳನ್ನು ಲೋಡ್ ಮಾಡಲು ಮತ್ತು ಸಾಗಿಸಲು ಅವರು ಅನುಮತಿಸಿದರು.
ಈ ವಂಚನೆ ಕೃತ್ಯವು ಸೆಪ್ಟೆಂಬರ್ 2021 ಮತ್ತು ಮಾರ್ಚ್ 2022 ರ ನಡುವೆ ನಡೆದಿದ್ದು, ರೈಲ್ವೆಗೆ ಅಪಾರ ನಷ್ಟವನ್ನು ಉಂಟುಮಾಡಿದೆ. ತನ್ನ ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, ಸಿಬಿಐ ಐಪಿಸಿಯ ಸೆಕ್ಷನ್ 120 ಬಿ ಮತ್ತು 420 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.
ಅಂದಹಾಗೆ, ಆಲಂ ನೋಡಲು ಬೆಳ್ಳಗೆ ಹರಳಿನಂತೆ ಇರುವ ಪದಾರ್ಥವಾಗಿದೆ. ಇದನ್ನು ಅಲ್ಯುಮಿನಿಯಂ ಹಾಗೂ ಪೊಟ್ಯಾಶಿಯಂ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸುತ್ತಾರೆ. ಇದನ್ನು ಸ್ಪಟಿಕ ಎಂದು ಕೂಡ ಹೇಳಲಾಗುತ್ತದೆ.