ಕೋವಿಡ್ ಎರಡನೇ ಅಲೆಯ ಸಂಕಷ್ಟದ ನಡುವೆ ಕಳೆದ ಒಂದು ತಿಂಗಳಿನಿಂದ ಭಾರತೀಯ ರೈಲ್ವೇ ದೇಶಾದ್ಯಂತ 20,770 ಟನ್‌ಗಳಷ್ಟು ದ್ರವ ರೂಪದ ಆಮ್ಲಜನಕ ಸಾಗಾಟ ಮಾಡಿದ್ದು, 15 ರಾಜ್ಯಗಳ ಜನರ ಲೈಫ್‌ಲೈನ್ ಆಗಿ ಕೆಲಸ ಮಾಡಿದೆ.
ಇದುವರೆಗೂ 305 ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಉದ್ದೇಶಿತ ಸ್ಥಳಗಳಿಗೆ ಆಮ್ಲಜನಕ ತಲುಪಿಸಿದ್ದರೆ, ಇನ್ನೂ ಆರು ರೈಲುಗಳು 420 ಟನ್‌ಗಳಷ್ಟು ದ್ರವರೂಪದಲ್ಲಿರುವ ವೈದ್ಯಕೀಯ ಆಮ್ಲಜನಕವನ್ನು 26 ಟ್ಯಾಂಕರ್‌ಗಳಲ್ಲಿ ತಲುಪಬೇಕಾದ ಸ್ಥಳಕ್ಕೆ ತಲುಪಿಸಲು ಹೊರಟಿವೆ.
ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತಮಿಳು ನಾಡು ಹಾಗೂ ತೆಲಂಗಾಣ ರಾಜ್ಯಗಳು ಇದುವರೆಗೂ ಒಟ್ಟಾರೆಯಾಗಿ 1600 ಟನ್‌ಗಳಷ್ಟು ದ್ರವ ಆಮ್ಲಜನಕ ಸ್ವೀಕರಿಸಿವೆ.
15 ರಾಜ್ಯಗಳ 39 ನಗರಗಳಿಗೆ 1,237 ಟ್ಯಾಂಕರ್‌ಗಳಲ್ಲಿ 20,770 ಟನ್‌ಗಳಷ್ಟು ದ್ರವ ರೂಪದ ಆಮ್ಲಜನಕವನ್ನು ತಲುಪಿಸಲಾಗಿದೆ ಎಂದು ಭಾರತೀಯ ರೈಲ್ವೇ ತಿಳಿಸಿದೆ.
ಏಪ್ರಿಲ್ 24ರಂದು ಮಹಾರಾಷ್ಟ್ರದಲ್ಲಿ 126 ಟನ್‌ಗಳಷ್ಟು ಆಮ್ಲಜನಕವನ್ನು ಸಾಗಾಟ ಮಾಡುವ ಮೂಲಕ ’ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲುಗಳು ತಮ್ಮ ಈ ಸೇವೆಗೆ ಚಾಲನೆ ಕೊಟ್ಟಿದ್ದವು.