ಉಡುಪಿ: ರೈಲು ಹಳಿ ನಿರ್ವಾಹಕನ ಕರ್ತವ್ಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ರೈಲು ಅಪಘಾತ ತಪ್ಪಿದ ಘಟನೆ ಭಾನುವಾರ ಬೆಳಗಿನ ಜಾವ ಕೊಂಕಣ ರೈಲ್ವೆಯ ಇನ್ನಂಜೆ -ಪಡುಬಿದ್ರಿ ರೈಲು ನಿಲ್ದಾಣಗಳ ನಡುವೆ ನಡೆದಿದೆ.
ಕೊಂಕಣ ರೈಲ್ವೆ ಮಾರ್ಗದ ಕಾಪು ತಾಲೂಕಿನ ಇನ್ನಂಜೆ -ಪಡುಬಿದ್ರೆ ಬಳಿ ಹಳಿ ಜೋಡಣೆ ತಪ್ಪಿರುವುದನ್ನು ಸಕಾಲದಲ್ಲಿ ಗಮನಿಸಿದ ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಸಂಭಾವ್ಯ ಭಾರಿ ದುರಂತವನ್ನು ತಪ್ಪಿಸಿದ್ದಾರೆ. ತಡರಾತ್ರಿ 2.20 ಕ್ಕೆ ಪ್ರದೀಪ್ ಹಳಿಗಳ ಪರಿಶೀಲನೆ ಗಸ್ತು ನಡೆಸುತ್ತಿದ್ದಾಗ ಹಳಿ ಜೋಡಣೆ ತಪ್ಪಿರುವುದನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣವೇ ಉಡುಪಿಯ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಅಧಿಕಾರಿಗಳು ಕೂಡಲೇ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಹಳಿ ದುರಸ್ತಿಪಡಿಸಿದ್ದಾರೆ. ಇದಕ್ಕೆ ಸುಮಾರು ಮೂರು ಗಂಟೆ ಆಗಿದ್ದು ಈ ವೇಳೆ ಕೊಂಕಣ ರೈಲ್ವೆ ಮಾರ್ಗದ ಕೆಲವು ರೈಲುಗಳನ್ನು ತಡೆಹಿಡಿಯಲಾಗಿತ್ತು. ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಅವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿದ ಕೊಂಕಣ ರೈಲ್ವೆಯ ಚೇರ್ಮನ್ ಮತ್ತು ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು 25,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ಇತರೆ ಸ್ಥಳೀಯ ಅಧಿಕಾರಿಗಳು ಕೂಡ ಪ್ರದೀಪ್ ಶೆಟ್ಟಿ ಅವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದ್ದಾರೆ.