ಪ್ರಯಾಣದ ವೇಳೆ ನಿಲ್ದಾಣಗಳು ಅವ್ಯವಸ್ಥೆಗಳ ಅಗರವಾಗಿರುತ್ತದೆ ಎಂಬ ದೂರುಗಳು ರೈಲು ಪ್ರಯಾಣಿಕರಿಂದ ಪದೇಪದೇ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಇದೀಗ ರೈಲು ಪ್ರಯಾಣಿಕರಿಗೆ ಮತ್ತೊಂದು ಶುಭ ಸುದ್ದಿ ನೀಡಲಾಗಿದ್ದು, ದೇಶದ ಇನ್ನೂರು ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರದಂದು ಔರಂಗಬಾದ್ ನಲ್ಲಿ ಈ ವಿಷಯ ತಿಳಿಸಿದ್ದು, ಮೇಲ್ದರ್ಜೆಗೇರಿಸುವ ಕಾಮಗಾರಿ ಈಗಾಗಲೇ 32 ನಿಲ್ದಾಣಗಳಲ್ಲಿ ಆರಂಭವಾಗಿದೆ. 47 ನಿಲ್ದಾಣಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕರೆಯಲಾಗುತ್ತಿದೆ ಎಂದರು.
ದೇಶದ ಒಟ್ಟು 200 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದ್ದು, ಫುಡ್ ಕೋರ್ಟ್, ಪ್ರಯಾಣಿಕರ ನಿರೀಕ್ಷಣಾ ಕೊಠಡಿ ನಿರ್ಮಾಣ, ಮಕ್ಕಳಿಗಾಗಿ ಮನೋರಂಜನೆ ತಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿಲ್ದಾಣಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.