ನವದೆಹಲಿ: ಅರ್ಹ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳಿಗೆ(ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿ ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಲಿಂಕ್ಡ್ ಬೋನಸ್(ಪಿಎಲ್‌ಬಿ) ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸುಮಾರು 11.27 ಲಕ್ಷ ನಾನ್ ಗೆಜೆಟೆಡ್ ರೈಲ್ವೆ ನೌಕರರು ಈ ನಿರ್ಧಾರದಿಂದ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಈ ಪಾವತಿಯನ್ನು ದಸರಾ ರಜೆಯ ಮೊದಲು ಮಾಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ರೈಲ್ವೆ ನೌಕರರು ಪ್ರಯಾಣಿಕ ಮತ್ತು ಸರಕು ಸೇವೆಗಳ ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಇದು ಆರ್ಥಿಕತೆಗೆ ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ವಾಸ್ತವವಾಗಿ, ಲಾಕ್ ಡೌನ್ ಅವಧಿಯಲ್ಲಿಯೂ ಸಹ ರೈಲ್ವೇ ನೌಕರರು ಆಹಾರ, ರಸಗೊಬ್ಬರ, ಕಲ್ಲಿದ್ದಲು ಮತ್ತು ಇತರ ವಸ್ತುಗಳಂತಹ ಅಗತ್ಯ ವಸ್ತುಗಳು ಅಡೆತಡೆಯಿಲ್ಲದೆ ಸಾಗುವಂತೆ ಮಾಡಿದರು. ಕಾರ್ಯಾಚರಣೆಯ ಪ್ರದೇಶದಲ್ಲಿ ಅಂತಹ ಸರಕುಗಳ ಕೊರತೆ ಇರಲಿಲ್ಲ ಎಂದು ರೈಲ್ವೆ ಸಚಿವಾಲಯದ ಹೇಳಿಕೆ ತಿಳಿಸಿದೆ.
ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಪಿಎಲ್‌ಬಿ ಪಾವತಿಯಿಂದ 1,832.09 ಕೋಟಿ ರೂ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಪಿಎಲ್‌ಬಿ ಪಾವತಿಗೆ ನಿಗದಿಪಡಿಸಲಾದ ವೇತನ ಲೆಕ್ಕಾಚಾರದ ಸೀಲಿಂಗ್ ತಿಂಗಳಿಗೆ 7,000 ರೂ. ಆಗಿದ್ದು, ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳವರೆಗೆ 17,951 ರೂ. ಪಾವತಿಸಬೇಕಾದ ಗರಿಷ್ಠ ಮೊತ್ತವಾಗಿದೆ.