ಬೆಂಗಳೂರು: ರೈಲ್ವೆ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಮಧೇನು ಸ್ವಾಸ್ಥ್ಯ ಕೇಂದ್ರದ ಬಳಿ ನಡೆದಿದೆ.
ರಾಮಮೂರ್ತಿ ನಗರದ ನಿವಾಸಿ ರೋಹನ್ ಜಯಕೃಷ್ಣನ್ (21) ಮೃತ ಯುವಕ. ದರೋಡೆಕೋರರ ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೈಕ್ ರೈಲ್ವೆ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.
ಅಕ್ಟೋಬರ್ 25ರ ನಸುಕಿನ ಜಾವ 3:30ರ ಸುಮಾರಿಗೆ ಸಂಭವಿಸಿರುವ ಅಪಘಾತ ತಡವಾಗಿ ಬೆಳಕಿಗೆ ಬಂದಿದೆ. ಅಂದು ನಸುಕಿನ ಜಾವ ರೋಹನ್ ತನ್ನ ಬೈಕ್ ನಲ್ಲಿ ಸೇಲಂ ಬ್ರಿಡ್ಜ್ ಕಡೆ ಹೋರಟಿದ್ದಾಗ ವೇಗವಾಗಿ ಬಂದು ರಸ್ತೆಯ ಕೊನೆಯಲ್ಲಿದ್ದ ಕಬ್ಬಿಣದ ಗ್ರಿಲ್ ಗಳನ್ನೊಳಗೊಂಡ ರೈಲ್ವೆ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲೇ ರೋಹನ್ ಮೃತಪಟ್ಟಿದ್ದಾರೆ. ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಆದರೆ ಈಗ ಸಿಸಿಟಿವಿ ಪರಿಶೀಲನೆ ನಡೆಸಿದಾಗ ರೋಹನ್ ಬೈಕ್ ಅಪಘಾತವಾದ ಕೆಲವೇ ಕ್ಷಣಗಳಲ್ಲಿ ಬೈಕ್ ನಲ್ಲಿ ಮೂವರು ವೇಗವಾಗಿ ಘಟನಾ ಸ್ಥಳಕ್ಕೆ ಬಂದು ತಕ್ಷಣ ಯೂತರ್ನ್ ಪಡೆದು ವಾಪಾಸ್ ಹೋಗಿದ್ದಾರೆ. ದರೋಡೆಕೋರರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಕುಟುಂಬದವರು ರೋಹನ್ ಸಾವಿನ ಬಗ್ಗೆ ಅನುಮಾನವಿದ್ದು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.