ರಾಯಚೂರು: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಹಣ ವಸೂಲಿ ಮಾಡುತ್ತಿದ್ದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಸಾದಾವೂರಿನ ಖಾಸಗಿ ಅಂಗಡಿಯೊಂದರ ಮೇಲೆ ತಹಶೀಲ್ದಾರ್ ದಾಳಿ ನಡೆಸಿ ಅಂಗಡಿ ಸೀಜ್ ಮಾಡಿದ್ದು, ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಾದಾವೂರಿನ ಗ್ರಾಮ ಒನ್ ಕೇಂದ್ರದಲ್ಲಿ ಸರ್ಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಗ್ರಾಮಒನ್ ಕೇಂದ್ರವನ್ನು ಬಂದ್ ಮಾಡಿ ಇದರ ಪಾಸ್ವರ್ಡ್ ಬಳಕೆ ಮಾಡಿಕೊಂಡು ಲಕ್ಷ್ಮಿ ಕಂಪ್ಯೂಟರ್ ಎಂಬ ಹೆಸರಿನ ಅಂಗಡಿಯವರು ಒಂದು ಅರ್ಜಿಗೆ 200 ರೂಪಾಯಿಯಂತೆ ಗ್ರಾಮದ ಮಹಿಳೆಯರಿಂದ ಹಣ ವಸೂಲಿ ಮಾಡಿ ಯೋಜನೆಗೆ ನೋಂದಾಯಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಎಲ್.ಟಿ. ಚಂದ್ರಕಾಂತ್ ದಾಳಿ ನಡೆಸಿದ್ದು, ಅಂಗಡಿಯನ್ನು ಸೀಜ್ ಮಾಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.