
ಯಾದಗಿರಿ: ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿ ನಡೆಸಿದ್ದು, ಈ ವೇಳೆ ಜೂಜುಗಾರರು ಮನೆ ಮಹಡಿಯಿಂದ ಲಕ್ಷಾಂತರ ಹಣ ಎಸೆದು ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳನ್ನು ಬಾಚಿಕೊಂಡ ಸಾರ್ವಜನಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರದ ಬಾಪೂಗೌಡ ನಗರದಲ್ಲಿ ಪ್ರಭಾವಿ ರಾಜಕೀಯ ನಾಯಕರೊಬ್ಬರ ಸಂಬಂಧಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬಾಜಿಯಾಗಿಟ್ಟು ಜೂಜಾಟ ನಡೆಸುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಯಾದಗಿರಿ ಸೈಬರ್ ಕ್ರೈಂ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ.
ಏಕಾಏಕಿ ಪೊಲೀಸರ ದಾಳಿಯಿಂದ ಕಕ್ಕಾಬಿಕ್ಕಿಯಾದ ಜೂಜುಗಾರರು ಲಕ್ಷಾಂತರ ರೂಪಾಯಿ ಹಣವನ್ನು ಮನೆ ಮೇಲಿನ ಮಹಡಿಯಿಂದ ಕೆಳಗೆ ತೂರಿದ್ದಾರೆ. ಮನೆ ಪಕ್ಕದ ರಸ್ತೆಗಳ ಮೇಲೆಯೂ ನೋಟುಗಳು ಬಿದ್ದಿದ್ದು, ಅಲ್ಲಿದ್ದ ಕೆಲವರು ಸಿಕ್ಕಷ್ಟು ನೋಟುಗಳನ್ನು ಬಾಚಿಕೊಂಡು ಹೋಗಿದ್ದಾರೆ.
ಈ ಪೊಲೀಸರ ದಾಳಿಗೆ ಕೆಲ ನಿಮಿಷ ಮೊದಲು ವ್ಯಕ್ತಿಯೊಬ್ಬ 50 ಲಕ್ಷ ರೂಪಾಯಿಗಳನ್ನು ಬಾಜಿಯಲ್ಲಿ ಗೆದ್ದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ. ಪೊಲೀಸ್ ದಾಳಿಯ ಸಂದರ್ಭದಲ್ಲಿ 10.43 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ. 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 13 ಜನರನ್ನು ಬಂಧಿಸಲಾಗಿದೆ.