ರಾಯಚೂರು: ರಾಯಚೂರಿನ ಹಟ್ಟಿ ಪಟ್ಟಣದಲ್ಲಿ ಮಹಿಳಾ ಲ್ಯಾಬ್ ಟೆಕ್ನಿಶಿಯನ್ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಲ್ಯಾಬ್ ಟೆಕ್ನಿಶಿಯನ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತ ಮಹಿಳೆ ಮಗನ ವಯಸ್ಸಿನ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಮಾಟ-ಮಂತ್ರ ಪರಿಹಾರದ ಪೂಜೆ ಅಂತ ಪುಸಲಾಯಿಸಿ ಮಧ್ಯರಾತ್ರಿ ಮಹಿಳೆಯನ್ನು ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಹಟ್ಟಿ ಪೊಲಿಸರು ತಿಳಿಸಿದ್ದಾರೆ.
ಸಮೀರ್ ಸೋಹೈಲ್ (23) ಹಾಗೂ ಮೊಹಮ್ಮದ್ ಕೈಫ್ (23) ಬಂಧಿತರು. ಮಹಿಳೆಯ ಹಣ, ಚಿನ್ನಾಭರಣಗಳಿಗೆ ಅರಿಶಿನ, ಕುಂಕುಮ ಸಿಡಿಸಿ ಪೂಜೆ ನೆಪದಲ್ಲಿ ಅದನ್ನೂ ದೋಚಿದ್ದ ಆರೋಪಿಗಳು ಮಹಿಳೆಯನ್ನು ಕೊಲೆಗೈದು ಬಳಿಕ ಆಕೆಯ ಮನೆಯ ಬಳಿಯೇ ಮೃತದೇಹವನ್ನು ಸುಟ್ಟುಹಾಕಿದ್ದರು.
ಕಳೆದ ತಿಂಗಳು ಮಂಜುಳಾ ಎಂಬ ಲ್ಯಾಬ್ ಟೆಕ್ನಿಶಿಯನ್ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವಿನ ಬಗ್ಗೆ ಅನುಮಾನವಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ಇದೆ ಎಂದು ಮೃತಳ ಮಗ ಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.