ರಾಯಚೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ನೀರು ಇಲ್ಲದಿರುವುದನ್ನು ಖಂಡಿಸಿ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದ್ದರು. ಇದನ್ನು ಮುಚ್ಚಿ ಹಾಕಲು ವಾರ್ಡನ್ ಗಿರಿಜಾ ವಿದ್ಯಾರ್ಥಿನಿಯರ ವಿರುದ್ಧ ಆರೋಪವೊಂದನ್ನು ಮಾಡಿದ್ದರು. ವಿದ್ಯಾರ್ಥಿನಿಯರು ‘ನಗ್ನ ವಿಡಿಯೋ ಕಾಲ್’ ಮಾಡ್ತಾರೆ ಎಂದು ವಾರ್ಡನ್ ಗಿರಿಜಾ ಆರೋಪಿಸಿದ್ದರು. ನಂತರ ವಿದ್ಯಾರ್ಥಿನಿಯರು ವಾರ್ಡನ್ ಬದಲಾಯಿಸುವಂತೆ ಪ್ರತಿಭಟನೆ ನಡೆಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿನಿಲಯದಲ್ಲಿ ಘಟನೆ ನಡೆದಿದೆ. ಈ ಹಿನ್ನೆಲೆ ವಾರ್ಡನ್ ಗಿರಿಜಾ ಅವರನ್ನು ಎತ್ತಂಗಡಿ ಮಾಡಿ ಹಿಂದುಳಿದ ವರ್ಗಗಳ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಗಿರಿಜಾಗೆ ಯಾವುದೇ ಸ್ಥಳವನ್ನು ತೋರಿಸದೇ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಈರಮ್ಮ ಎಂಬುವವರನ್ನು ಪ್ರಭಾರಿ ವಾರ್ಡನ್ ಆಗಿ ನೇಮಿಸಲಾಗಿದೆ. ವಿದ್ಯಾರ್ಥಿನಿಯರು ನೀರಿನ ಸಮಸ್ಯೆ ಬಗ್ಗೆ ಪ್ರತಿಭಟಿಸಿದ್ದಕ್ಕೆ ವಾರ್ಡನ್ ಗಿರಿಜಾ ವಿದ್ಯಾರ್ಥಿನಿಯರು ‘ನಗ್ನ ವಿಡಿಯೋ ಕಾಲ್’ ಮಾಡ್ತಾರೆ ಎಂದು ಆರೋಪಿಸಿದ್ದರು.
ಟ್ಯಾಂಕರ್ ಮೂಲಕ ನೀರು ಹಾಕಿಸುವಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ವಾರ್ಡನ್ ಅವರಿಗೆ ಸೂಚನೆ ನೀಡಿದ್ದರೂ ವಾರ್ಡನ್ ಮಾತ್ರ ನೀರನ್ನು ಟ್ಯಾಂಕರ್ ಮೂಲಕ ಹಾಕಿಸದೇ ವಿದ್ಯಾರ್ಥಿನಿಯರಿಗೆ ಯಾವುದಕ್ಕೂ ನೀರಿಲ್ಲದಂತೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು. ಅಲ್ಲದೇ ಮೀಡಿಯಾದವರಿಗೆ ನೀವೇ ಹೇಳಿದ್ದೀರಿ ಎಂದು ವಾರ್ಡನ್ ಕೆಲ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಅವರಿಗೆ ರಾತ್ರಿ ಊಟ ಮತ್ತು ಬೆಳಗಿನ ಉಪಾಹಾರ ಮತ್ತು ಊಟ ನೀಡದೆ ತೊಂದರೆ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು.