
ರಾಯಚೂರು: ಬಾಡಿಗೆದಾರನೊಬ್ಬ ಮನೆಯೊಡತಿಯನ್ನೇ ಹತ್ಯೆ ಮಾಡಿರುವ ಘಟನೆ ರಾಯಚೂರಿನ ಉದಯನಗರದಲ್ಲಿ ನಡೆದಿದೆ.
ಶೋಭಾ ಪಾಟೀಲ್ (63) ಕೊಲೆಯಾದ ಮಹಿಳೆ. ಶಿವುಸ್ವಾಮಿ ಕೊಲೆ ಮಾಡಿರುವ ಆರೋಪಿ. ಶೋಭಾ ಪಾಟೀಲ್ ಉದಯನಗರದ ನಿವಾಸಿ ಆದರೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಹಾಗಾಗಿ ಉದಯನಗರದ ತಮ್ಮ ಮನೆಯ ಮಹಡಿಯಲ್ಲಿದ್ದ ರೂಮನ್ನು ಬಾಡಿಗೆಗೆ ನೀಡಿದ್ದರು. ಆಗಾಗ ಉದಯನಗರ ನಿವಾಸಕ್ಕೆ ಶೋಭಾ ಪಾಟೀಲ್ ಬಂದು ಹೋಗುತ್ತಿದ್ದರು.
ಕೆಲ ದಿನಗಳ ಹಿಂದೆ ಶೋಭಾ ಪಾಟೀಲ್ ಮನೆ ಖಾಲಿ ಮಾಡುವಂತೆ ಶಿವುಸ್ವಾಮಿಗೆ ಹೇಳಿದ್ದರು. ಅಡ್ವಾನ್ಸ್ ವಿಚಾರವಾಗಿ ಮನೆಯೊಡತಿ ಶೋಭಾ ಹಾಗೂ ಬಾಡಿಗೆದಾರ ಶಿವು ನಡುವೆ ಜಗಳವಾಗಿತ್ತು. ಶೋಭಾ ಪಾಟೀಲ್ ಉದಯನಗರದ ಮನೆಗೆ ಬಂದಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ್ದ ಶಿವುಸ್ವಾಮಿ, ಶೋಭಾ ಅವರ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಸಂಬಂಧಿಕರಿಗೆ ವಿಷಯ ತಿಳಿಸಿ ತಾನೇ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದ. ಶೋಭಾ ಅವರಿಗೆ ಹೃದಯಸಂಬಂಧಿ ಕಾಯಿಲೆ ಇದ್ದುದರಿಂದ ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಎಂದು ಸಂಬಂಧಿಕರು ಭಾವಿಸಿದ್ದರು. ಆದರೆ ಶೋಭಾ ಅವರ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲಿಸರು ಬಾಡಿಗೆದಾರ ಶಿವುಸ್ವಾಮಿಯನ್ನು ವಿಚಾರಣೆ ನಡೆಸಿದಾಗ ತಾನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.