ರಾಯಚೂರು: ರಾಯಚೂರಿನ ರಾಮಕೃಷ್ಣ ಆಶ್ರಮದ ಗುರೂಜಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಯನ್ನು ಥಳಿಸಿ, ಕೂಡಿಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿದ್ಯಾರ್ಥಿಯೊಬ್ಬ ಪೆನ್ನು ಕದ್ದಿದ್ದಾನೆ ಎಂಬ್ಬ ಕಾರಣಕ್ಕೆ ಆಶ್ರಮದ ಗುರೂಜಿ ಆತನನ್ನು ಮನಬಂದಂತೆ ಥಳಿಸಿದ್ದಲ್ಲದೇ, ಮೂರು ದಿನಗಳ ಕಾಲ ವಿದ್ಯಾರ್ಥಿಯನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದಾರೆ ಎನ್ನಲಾಗಿದೆ.
ಶ್ರವಣ ಕುಮಾರ್ ಹಲ್ಲೆಗೊಳಗಾದ ವಿದ್ಯಾರ್ಥಿ. ಗುರೂಜಿ ಹೊಡೆದ ಏಟಿಗೆ ಬಾಲಕನ ಕಣ್ಣುಗಳು, ಮುಖ ಊದಿಕೊಂಡಿವೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಶ್ರವಣ ಕುಮಾರ್ ಬಡತನದ ಕಾರಣಕ್ಕೆ ಆಶ್ರಮದಲ್ಲಿ ಇದ್ದ. ಸಹಪಾಠಿಗಳ ಜೊತೆ ಆಟವಾಡುತ್ತ ಪೆನ್ನು ಕದ್ದಿದ್ದನಂತೆ. ಈ ವಿಚಾರವನ್ನು ಸಹಪಾಠಿಗಳು ಆಶ್ರಮದ ಗುರೂಜಿಗೆ ದೂರು ನೀಡಿದ್ದಾರೆ. ಆಶ್ರಮದ ಗುರೂಜಿ ವೇಣುಗೋಪಾಲ ಎಂಬುವವರು ವಿದ್ಯಾರ್ಥಿ ಶ್ರವಣ ಕುಮಾರ್ ನನ್ನು ಕರೆದು ಥಳಿಸಿದ್ದಾರೆ. ಅಲ್ಲದೇ ಮೂರು ದಿನ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿನ ರಾಮಕೃಷ್ಣ ಆಶ್ರಮಕ್ಕೆ ವಿದ್ಯಾರ್ಥಿ ತಾಯಿ ಭೇಟಿ ನೀಡಿದ್ದಾಗ ವಿಷಯ ಬಹಿರಂಗವಾಗಿದೆ. ವಿದ್ಯಾರ್ಥಿಯ ಮೈ ಕೈ ತುಂಬಾ ಗಾಯಗಳಾಗಿದ್ದು, ಮುಖ, ಕಣ್ಣು ಊದಿಕೊಂಡಿದೆ. ಸದ್ಯ ವಿದ್ಯಾರ್ಥಿ ಶ್ರವಣ ಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.