ರಾಯಚೂರು: ಗ್ರಾಹಕರಿಗೆ ಸಕಾಲದಲ್ಲಿ ಪಿಜ್ಜಾ ತಲುಪಿಸದ ಕಂಪನಿಗಳಿಗೆ 40,000 ರೂ. ಪಾವತಿಸುವಂತೆ ರಾಯಚೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಪಿಜ್ಜಾ ತಲುಪಿಸದೆ ಹಣ ಸ್ವೀಕರಿಸಿದ ಸಂದೇಶ ಕಳುಹಿಸಿ ಮಾನಸಿಕ ಹಿಂಸೆ ಉಂಟುಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ. ವಕೀಲರಾದ ವಿದ್ಯಾಶ್ರೀ ಅವರು 2024ರ ಮಾರ್ಚ್ 17ರಂದು ಸಂಜೆ 7 ಗಂಟೆಗೆ ಜೊಮ್ಯಾಟೋ ಮೂಲಕ ಡಾಮಿನೊಸ್ ಪಿಜ್ಜಾ ಕಳುಹಿಸಿ ಕೊಡುವಂತೆ 337.45 ರೂ. ಪಾವತಿಸಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದಾರೆ.
ಆದರೆ, ರಾತ್ರಿ 9 ಗಂಟೆಯಾದರೂ ಜೊಮ್ಯಾಟೋ ಕಂಪನಿ ಪಿಜ್ಜಾ ಸರಬರಾಜು ಮಾಡಿರಲಿಲ್ಲ. ಫೋನ್ ಮಾಡಿ ವಿಚಾರಿಸಿದಾಗ ಪಿಜ್ಜಾ ತಯಾರಿಸುತ್ತಿದ್ದು, ಶೀಘ್ರವೇ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಪಿಜ್ಜಾ ಕಳಿಸದೇ ಇದ್ದರೂ, ಹಣ ಸ್ವೀಕರಿಸಿದ ಸಂದೇಶ ಮೊಬೈಲ್ ಗೆ ಬಂದಿದೆ.
ನಂತರ ವಿದ್ಯಾಶ್ರೀ ಅವರು ಕರೆ ಮಾಡಿ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಪರಿಹಾರ ಕೊಡಿಸುವಂತೆ ಕೋರಿ ವಿದ್ಯಾಶ್ರೀ ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು. ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಕೆ.ವಿ. ಸುರೇಂದ್ರಕುಮಾರ್ ಮತ್ತು ಸದಸ್ಯ ಪ್ರಭುದೇವ ಪಾಟೀಲ್ ಅವರು ದಾಖಲೆ ಸಾಕ್ಷಿ, ದಾಖಲೆಗಳನ್ನು ಪರಿಶೀಲಿಸಿ 40,000 ರೂ. ಪಾವತಿಸುವಂತೆ ಆದೇಶಿಸಿದ್ದಾರೆ.