ರಾಯಚೂರು: ರಾಯಚೂರಿನ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ಪುತ್ರನಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದರೂ ಈವರೆಗೂ ಶಾಸಕಿ ಪುತ್ರನ ಬಂಧನವಾಗಿಲ್ಲ. ಕೆಲ ಪೊಲೀಸ್ ಸಿಬ್ಬಂದಿಗಳನ್ನೇ ವರ್ಗಾವಣೆ ಮಾಡುವಂತೆ ಶಾಸಕಿ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಸಹಿ ಆಂದೋಲನ ಹಮ್ಮಿಕೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿಗಳು ತಮಗೂ ಹಾಗೂ ತಮ್ಮ ಕುಟುಂಬಕ್ಕೂ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ದೇವದುರ್ಗದ ಎಲ್ ಆಂಡ್ ಓ ಹಾಗೂ ಟ್ರಾಫಿಕ್ ಠಾಣೆ ಎಲ್ಲಾ ಪೊಲೀಸ್ ಕಾನ್ಸ್ಟೇಬಲ್ ಗಳು ಸಹಿ ಆಂದೋಲನ ಮಾಡುತ್ತಿದ್ದಾರೆ.
ಎಲ್ ಆಂಡ್ ಓ ಠಾಣೆಯ 36, ಟ್ರಾಫಿಕ್ ಠಾಣೆಯ 23 ಪೊಲೀಸ್ ಕಾನ್ಸ್ಟೇಬಲ್ ಗಳು ಸೇರಿ 59 ಸಿಬ್ಬಂದಿಗಳಿಂದ ಎಸ್ ಪಿಗೆ ದೂರು ನೀಡಲಾಗಿದೆ. ಶಾಸಕಿ ರಾಜಕೀಯ ಪ್ರಭಾವ ಬಳಸಿ ಒತ್ತಡ ಹಾಕಿದ್ದರಿಂದ ಆರೋಪಿ ಪುತ್ರನ ಬಂಧಿಸದೇ ಇರಲು ಕಾರಣವಗಿದೆ. ಅಲ್ಲದೇ ಪೊಲೀಸ್ ಕಾಲೋನಿ ಬಳಿ ಶಾಸಕಿ ನಿವಾಸ ಹಾಗೂ ಜೆಡಿಎಸ್ ಕಚೇರಿ ಇರುವುದರಿಂದ ಪ್ರತಿದಿನ ಕಿರಿಕಿರಿಯಾಗುತ್ತಿರುವ ಬಗ್ಗೆಯೂ ದೂರು ನೀಡಿದ್ದಾರೆ.