ಬೆಂಗಳೂರು: ಅಕ್ಕಿಯೊಂದಿಗೆ ನೀಡಲಾಗುತ್ತಿದ್ದ ಜೋಳ ಮತ್ತು ರಾಗಿ ವಿತರಣೆಯನ್ನು ಶೀಘ್ರವೇ ಸ್ಥಗಿತಗೊಳಿಸಲಾಗುವುದು.
ಉತ್ತರ ಕರ್ನಾಟಕ ಭಾಗದ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಜೊತೆಗೆ ನೀಡುತ್ತಿದ್ದ ಜೋಳ ವಿತರಣೆ ಆಗಸ್ಟ್ ಬಳಿಕ ಸ್ಥಗಿತವಾಗಲಿದೆ. ದಕ್ಷಿಣ ಕರ್ನಾಟಕದ ಭಾಗದ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿಯೊಂದಿಗೆ ನೀಡುತ್ತಿದ್ದ ರಾಗಿ ವಿತರಣೆಯನ್ನು ಸೆಪ್ಟಂಬರ್ ನಂತರ ಸ್ಥಗಿತಗೊಳಿಸಲಾಗುವುದು. ಈ ಹಿಂದೆ ನೀಡುತ್ತಿದ್ದಂತೆ 10 ಕೆಜಿ ಅಕ್ಕಿ ವಿತರಿಸಲಾಗುವುದು.
ಕೇಂದ್ರ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ರಾಗಿ, ಒಂದು ಲಕ್ಷ ಮೆಟ್ರಿಕ್ ಟನ್ ಜೋಳ, 2.60 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಿದೆ. ಸಂಗ್ರಹಿಸಿದ್ದ ರಾಗಿ, ಜೋಳ ಖಾಲಿಯಾಗುತ್ತಿವೆ.
ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ 2022 ರ ಸೆಪ್ಟೆಂಬರ್ ವರೆಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಇರುವ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಜೋಳ, ರಾಗಿ ನಿಲ್ಲಿಸಿದರೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಸಿಗಲಿದೆ.
ಉತ್ತರ ಕರ್ನಾಟಕದ ಪ್ರಮುಖ ಆಹಾರಧಾನ್ಯ ಜೋಳ, ದಕ್ಷಿಣ ಕರ್ನಾಟಕದ ಪ್ರಮುಖ ಆಹಾರಧಾನ್ಯ ರಾಗಿ ವಿತರಿಸುತ್ತಿದ್ದ ಕಾರಣ ಬಿಪಿಎಲ್ ಕಾರ್ಡ್ ದಾರರಿಗೆ ಅನುಕೂಲವಾಗಿತ್ತು. ರಾಗಿ, ಜೋಳ ವಿತರಣೆ ನಿಲ್ಲಿಸಿ ಹಿಂದೆ ನೀಡುತ್ತಿದ್ದಂತೆ ಅಕ್ಕಿ ನೀಡಲಾಗುವುದು ಎನ್ನಲಾಗಿದೆ.