ವಿಜಯಪುರ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜಾತಿ ಸಮೀಕ್ಷೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅವರಿಗೆ ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಎಂದೇ ಗೊತ್ತಿಲ್ಲ ಎಂದು ರಾಹುಲ್ ಗಾಂಧಿ ಹುಟ್ಟಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿವಾದಿತ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಮುಸ್ಲಿಮರಿಗೆ ಹುಟ್ಟಿದ್ದಾನೋ, ಕ್ರಿಸ್ತರಿಗೆ ಹುಟ್ಟಿದ್ದಾನೋ ಎನ್ನುವುದರ ಬಗ್ಗೆ ತನಿಖೆಗೆ ಆಗಬೇಕಿದೆ. ಜನಿವಾರ ಹಾಕಿದ ಬ್ರಾಹ್ಮಣ ಎಂದು ತಿಳಿದುಕೊಂಡಿದ್ದಾನೆ. ಅವರ ಅಪ್ಪ ಬೇರೆ, ಅವ್ವ ಇಟಲಿಯಾಕೆ. ಅಪ್ಪ ಮೊಘಲರ ಕೈಯಲ್ಲಿ ಕೆಲಸ ಮಾಡಿದವ, ಮರಿ ಮೊಮ್ಮಗ ಕಂಟ್ರಿ ಪಿಸ್ತೂಲ್ ಇದ್ದಂಗೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಈಗ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳಿದ್ದಾರೆ. ಇದರ ಬಗ್ಗೆ ದಲಿತರು ವಿಚಾರ ಮಾಡಬೇಕು. ಈಗ ಅಮೆರಿಕಕ್ಕೆ ಹೋಗಿ ದೇಶದ್ರೋಹಿ ಹೇಳಿಕೆ ಕೊಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಬಗ್ಗೆ ಯತ್ನಾಳ್ ಕಿಡಿಕಾರಿದ್ದಾರೆ.
ಬಾಂಗ್ಲಾದೇಶದಂತೆ ದೇಶದಲ್ಲಿ ಹಿಂದೂಗಳ ಹಬ್ಬದ ಮೇಲೆ ಮುಸ್ಲಿಮರ ಗೂಂಡಾಗಿರಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಲ್ಲಿ ಗೂಂಡಾಗಿರಿ ಇರುತ್ತದೆ. ಮುಸ್ಲಿಮರ ತುಷ್ಠೀಕರಣದಿಂದ ಹಿಂದೂಗಳ ರಕ್ಷಣೆ ಮಾಡುತ್ತಿಲ್ಲ. ದೇಶದಲ್ಲಿ ಹಿಂದೂಗಳು ಹೇಳಿದಂತೆ ದೇಶ ನಡೆಯಬೇಕು. ಮಸೀದಿ ಮುಂದೆ ಹಾಡಬಾರದು ಅಂದರೆ ಹೇಗೆ? ಗಾಂಧಿ, ನೆಹರು ಪ್ರತ್ಯೇಕ ಪಾಕಿಸ್ತಾನ ಮಾಡಿಕೊಟ್ಟಿದ್ದಾರೆ ಅಲ್ಲಿಗೆ ಹೋಗಬಹುದು ಎಂದು ಹೇಳಿದ್ದಾರೆ.