ಜನಸಾಮಾನ್ಯರ ಬದುಕು ಬವಣೆ ಅರಿಯಲು ಅವರೊಂದಿಗೆ ಬೆರೆಯುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗಾಗಲೇ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದ ರೈತರು, ಬೈಕ್ ರಿಪೇರಿ ಮಾಡುವ ಗ್ಯಾರೇಜ್, ಹಾಗೂ ಟ್ರಕ್ ನಲ್ಲಿ ಚಾಲಕನ ಜೊತೆ ಪ್ರಯಾಣ ಮೊದಲಾದವುಗಳನ್ನು ಮಾಡಿದ್ದರು.
ಇದೀಗ ಮಂಗಳವಾರದಂದು ಬೆಳ್ಳಂಬೆಳಿಗ್ಗೆಯೇ ಏಷ್ಯಾದ ಅತಿ ದೊಡ್ಡ ತರಕಾರಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಆಜಾದ್ ಪುರ್ ಮಂಡಿಗೆ ರಾಹುಲ್ ಗಾಂಧಿಯವರು ಭೇಟಿ ನೀಡಿದ್ದು, ಅಲ್ಲಿನ ವ್ಯಾಪಾರಿಗಳ ಜೊತೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ.
ತರಕಾರಿ ಹಾಗೂ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಇರುವ ಬೆಲೆ, ಅತಿವೃಷ್ಟಿ – ಅನಾವೃಷ್ಟಿ ಕಾರಣಕ್ಕೆ ಆಗುವ ಬೆಲೆಯ ಏರಿಳಿತ ಮೊದಲಾದ ಮಾಹಿತಿಯನ್ನು ವ್ಯಾಪಾರಿಗಳಿಂದ ಪಡೆದ ರಾಹುಲ್ ಗಾಂಧಿ, ಅವರು ನೀಡಿದ ವಿವರವನ್ನು ಆಸಕ್ತಿಯಿಂದ ಆಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.