ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರು ಉನ್ನತ ಸ್ಥಾನಕ್ಕಾಗಿ ಪೈಪೋಟಿ ಇದೆ.
ಸೋಮವಾರ ನಡೆಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ರಾಹುಲ್ ಗಾಂಧಿ ಮತ ಚಲಾಯಿಸದಿರಬಹುದು ಎಂಬ ಊಹಾಪೋಹಗಳಿವೆ. ಆದರೆ, ಪಕ್ಷವು ಭಾನುವಾರ ದೃಢಪಡಿಸಿದೆ. ಕರ್ನಾಟಕದ ಬಳ್ಳಾರಿಯ ಭಾರತ್ ಜೋಡೋ ಯಾತ್ರಾ ಶಿಬಿರದಲ್ಲಿ ರಾಹುಲ್ ಗಾಂಧಿ ಮತ ಚಲಾಯಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಳೆ ರಾಹುಲ್ ಗಾಂಧಿ ಅವರು ಎಲ್ಲಿ ಮತ ಚಲಾಯಿಸುತ್ತಾರೆ ಎಂಬ ಪ್ರಶ್ನೆಗಳಿವೆ. ಯಾವುದೇ ಊಹಾಪೋಹ ಇರಬಾರದು. ಪಿಸಿಸಿ ಪ್ರತಿನಿಧಿಗಳಾದ ಸುಮಾರು 40 ಭಾರತ ಯಾತ್ರಿಗಳೊಂದಿಗೆ ಬಳ್ಳಾರಿಯ ಸಂಗನಕಲ್ಲುನಲ್ಲಿರುವ ಭಾರತ್ ಜೋಡೋ ಯಾತ್ರಾ ಕ್ಯಾಂಪ್ ಸೈಟ್ ನಲ್ಲಿ ಅವರು ಮತದಾನ ಮಾಡಲಿದ್ದಾರೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ನ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಪಕ್ಷದ ಪ್ರಧಾನ ಕಚೇರಿಯಲ್ಲಿ ಮತ ಚಲಾಯಿಸಲಿದ್ದಾರೆ. ಅಕ್ಟೋಬರ್ 17 ರ ಚುನಾವಣೆಗಾಗಿ, ಎಲ್ಲಾ ರಾಜ್ಯಗಳಲ್ಲಿ 67 ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರತಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮತದಾನ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಗುಪ್ತ ಮತದಾನದ ಮೂಲಕ ಮತದಾನ ನಡೆಯಲಿದೆ. ಎಲ್ಲಾ ಬ್ಯಾಲೆಟ್ ಬಾಕ್ಸ್ ಗಳನ್ನು ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ತರಲಾಗುತ್ತದೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಮುಗಿದ ತಕ್ಷಣ ಫಲಿತಾಂಶ ಪ್ರಕಟವಾಗಲಿದೆ.