ಕಾಂಗ್ರೆಸ್ ನ ರಾಹುಲ್ ಗಾಂಧಿ ಪುಟ್ಟ ಬಾಲಕಿಯೊಂದಿಗೆ ನಡೆಸುತ್ತಿರುವ ಸಂಭಾಷಣೆ ಅನೇಕ ನೆಟ್ಟಿಗರ ಹೃದಯ ಗೆದ್ದಿದೆ. ಮಹಾರಾಷ್ಟ್ರದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಮಗುವಿನ ನಡುವಿನ ಹೃದಯಸ್ಪರ್ಶಿ ಸಂಭಾಷಣೆಯ ವೀಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಸುಮಾರು ಮೂರು ನಿಮಿಷಗಳ ಸುದೀರ್ಘ ವೀಡಿಯೊದಲ್ಲಿ, ಇಬ್ಬರೂ ಚಾಕಲೇಟ್, ನಾಯಿ ಸೇರಿದಂತೆ ವೃತ್ತಿ ಜೀವನದವರೆಗಿನ ವಿಷಯಗಳನ್ನು ಚರ್ಚಿಸಿದ್ದು ಮನಗೆದ್ದಿದೆ.
“ಇದು ಸಮಸ್ಯೆಯಾಗಲಿದೆ, ಸರಿ?” ಎಂದು ರಾಹುಲ್ ಗಾಂಧಿ ಕೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಪೊಲೀಸ್ ಪಡೆಗೆ ಸೇರುವ ಹುಡುಗಿಯ ಬಯಕೆ ತಿಳಿದ ರಾಹುಲ್, ಕಳ್ಳ ಮತ್ತು ಪೊಲೀಸರ ವಿಚಾರವಾಗಿ ಮಾತನಾಡುತ್ತಾರೆ.
ಎಲ್ಲರೂ ಪೊಲೀಸರಾದರೆ, ಕಳ್ಳರಿಗೆ ಕದಿಯಲು ಏನೂ ಉಳಿಯುವುದಿಲ್ಲ. ಆಗ ಪೊಲೀಸರು ನಿರುದ್ಯೋಗಿಯಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರೆ, ಆದರೆ ಯಾರಾದರೂ ಕದಿಯಲು ಇರುತ್ತಾರೆ ಎಂದು ಬಾಲಕಿ ಹೇಳುತ್ತಾಳೆ.
ನಿಮ್ಮ ಪೋಷಕರು ಏನು ಮಾಡುತ್ತಾರೆ ಎಂದು ಕೇಳಿದಾಗ, ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ನಾಂದೇಡ್ ಜಿಲ್ಲೆಯಲ್ಲಿ ಯಾತ್ರೆಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿಗೆ ಬಾಲಕಿ ಹೇಳುವುದನ್ನು ಕೇಳಬಹುದು.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಜನಸಂಪರ್ಕ ಕಾರ್ಯಕ್ರಮವಾದ ಭಾರತ್ ಜೋಡೋ ಯಾತ್ರೆ ಶುಕ್ರವಾರ 65 ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದಲ್ಲಿರುವ ಬಿಜೆಪಿ ಮತ್ತು ಶಿಂಧೆಯ ಶಿವಸೇನೆ ಸರ್ಕಾರದ ಎದುರು ಎರಡೂವರೆ ವರ್ಷಗಳ ಕಾಲ ರಾಜ್ಯವನ್ನು ಆಳಿದ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟದ ಶಕ್ತಿಯ ಪ್ರದರ್ಶನವಾಗಿದೆ.
ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಆದಿತ್ಯ ಠಾಕ್ರೆ ಅವರು ಇಂದು ಹಿಂಗೋಲಿ ಜಿಲ್ಲೆಗೆ ಪ್ರವೇಶಿಸಿದಾಗ ಯಾತ್ರೆಯನ್ನು ಸೇರುವ ನಿರೀಕ್ಷೆಯಿದೆ. ಅವರು ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಮತ್ತು ಶಿವಸೇನಾ ಶಾಸಕ ಸಚಿನ್ ಅಹಿರ್ ಅವರೊಂದಿಗೆ ಸಂಜೆ 4 ಗಂಟೆಗೆ ಪಾದಯಾತ್ರೆಯಲ್ಲಿ ಸೇರಲಿದ್ದಾರೆ.