ಭಾರಿ ವಾಹನಗಳ ಚಾಲಕರ ಸಮಸ್ಯೆ ಅರಿಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಡರಾತ್ರಿ ಟ್ರಕ್ ಏರಿ ಪ್ರಯಾಣಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕನ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ರಾಹುಲ್ ಗಾಂಧಿ ದೆಹಲಿಯಿಂದ ಚಂಡಿಗಡಕ್ಕೆ ತೆರಳುವ ವೇಳೆ ಹರಿಯಾಣದ ಅಂಬಾಲ ಬಳಿ ಟ್ರಕ್ ಒಂದನ್ನು ನಿಲ್ಲಿಸಿ, ಅದರಲ್ಲಿ ಹತ್ತಿದ್ದಾರೆ. ಚಾಲಕ ಹಾಗೂ ನಿರ್ವಾಹಕನ ಜೊತೆ ಮಾತನಾಡುತ್ತಾ ತೆರಳಿದ ರಾಹುಲ್ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಕೆಲ ಕಿಲೋಮೀಟರ್ಗಳ ಪ್ರಯಾಣದ ನಂತರ ಟ್ರಕ್ನಿಂದ ರಾಹುಲ್ ಗಾಂಧಿ ಇಳಿದಿದ್ದು, ಇದರ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ಸಂಸದ ಇಮ್ರಾನ್ ಕೂಡ ಟ್ವಿಟರ್ ನಲ್ಲಿ ಇದನ್ನು ಶೇರ್ ಮಾಡಿದ್ದು, ರಾಹುಲ್ ಗಾಂಧಿಯವರಿಂದ ಮಾತ್ರ ಇಂಥದ್ದು ಸಾಧ್ಯ ಎಂದಿದ್ದಾರೆ.
ರಾಹುಲ್ ಗಾಂಧಿ ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಹಲವರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.