ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಬರದಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗರಂ ಆಗಿದ್ದಾರೆ. ಸಚಿವರ ಕ್ಷೇತ್ರಗಳಲ್ಲಿಯೇ ಹಿನ್ನಡೆಯಾಗಿರುವುದಕ್ಕೆ ಆಕ್ಷೇಪಿಸಿದ ಅವರು ಮೌಲ್ಯಮಾಪನದ ಬಳಿಕ ಸಂಪುಟ ಸರ್ಜರಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಆರು ತಿಂಗಳ ಮೊದಲೇ ಸಚಿವರಿಗೆ ತಲಾ ಒಂದೊಂದು ಕ್ಷೇತ್ರದಲ್ಲಿ ಉಸ್ತುವಾರಿ ನೀಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಟಾಸ್ಕ್ ನೀಡಲಾಗಿದ್ದರೂ ವಿಫಲರಾದ ಸಚಿವರಿಗೆ ಸಂಪುಟದಿಂದ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ.
ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಈ ಬಗ್ಗೆ ಚರ್ಚೆ ನಡೆಸಿ ನಿರೀಕ್ಷಿತ ಕಾರ್ಯಕ್ಷಮತೆ ತೋರದ ಸಚಿವರ ಪಟ್ಟಿ ಮಾಡಿ ವರದಿ ನೀಡಲು ಸೂಚನೆ ನೀಡಿದ್ದಾರೆ. ಪ್ರಭಾವಿ ಸಚಿವರು ಇರುವ ಕ್ಷೇತ್ರದಲ್ಲಿಯೇ ಹಿನ್ನಡೆ ಆಗಿರುವುದಕ್ಕೆ ಗರಂ ಆದ ರಾಹುಲ್ ಗಾಂಧಿ ವಿಧಾನಸಭಾ ಕ್ಷೇತ್ರವಾರು ಫಲಿತಾಂಶದ ವರದಿ ನೀಡಲು ಸೂಚಿಸಿದ್ದು, ಅಧಿಕಾರ ಮತ್ತು ಸ್ಥಾನಮಾನ ಪಡೆದುಕೊಂಡ ನಂತರ ಕಾರ್ಯಕ್ಷಮತೆ ತೋರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆನ್ನಲಾಗಿದೆ.
ಅಲ್ಲದೆ ಸರ್ಕಾರ ರಚನೆಯಾಗಿ ವರ್ಷವಾಗಿದ್ದು ಈ ಸಂದರ್ಭದಲ್ಲಿ ಕಳಪೆ ಸಾಧನೆ ತೋರಿದ ಐದಾರು ಮಂದಿಯನ್ನು ಸಂಪುಟದಿಂದ ಕೈ ಬಿಟ್ಟು, ಹೊಸಬರಿಗೆ ಅವಕಾಶ ನೀಡಲು ಸಣ್ಣ ಪ್ರಮಾಣದ ಸರ್ಜರಿ ನಡೆಸುವ ಚಿಂತನೆ ಆರಂಭವಾಗಿದೆ. ಇದರಿಂದಾಗಿ ಸಿದ್ದರಾಮಯ್ಯ ಸಂಪುಟದ ಅನೇಕ ಸಚಿವರಲ್ಲಿ ತಳಮಳ ಆರಂಭವಾಗಿದೆ.