
ಇದೀಗ ರಾಹುಲ್ ಗಾಂಧಿಯವರ ಪರ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಬ್ಯಾಟಿಂಗ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಮಾಧ್ಯಮ ಪ್ರತಿನಿಧಿಯೊಬ್ಬರ ಜೊತೆ ಮಾತನಾಡುವಾಗ ಅವಿಮುಕ್ತೇಶ್ವರಾನಂದ ಸರಸ್ವತಿ ರಾಹುಲ್ ಗಾಂಧಿಯವರ ಮಾತಿನ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿಯವರ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾದಾಗ ನಾನು ಅವರ ಭಾಷಣದ ಸಂಪೂರ್ಣ ವಿಡಿಯೋ ವೀಕ್ಷಿಸಿದ್ದೇನೆ. ಅವರು ಎಲ್ಲಿಯೂ ಹಿಂದೂ ಧರ್ಮದ ವಿರುದ್ಧ ಮಾತನಾಡಿಲ್ಲ. ಹಿಂದೂ ಧರ್ಮದಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಅವರು ಹೇಳಿದ್ದು, ಇದು ಸತ್ಯವಾಗಿದೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ತಿಳಿಸಿದ್ದಾರೆ.
ಅಲ್ಲದೇ ರಾಹುಲ್ ಗಾಂಧಿಯವರ ಭಾಷಣದ ಆಯ್ದ ಭಾಗದ ತುಣುಕುಗಳನ್ನಷ್ಟೇ ಹಂಚಿಕೊಳ್ಳುವ ಮೂಲಕ ಅಪಪ್ರಚಾರ ನಡೆಸುತ್ತಿರುವವರ ಕುರಿತು ತನಿಖೆ ನಡೆಸಬೇಕು ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಾತನಾಡುವಾಗ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವ ಕೆಲವರು, 24 ಗಂಟೆಗಳ ಕಾಲವೂ ಹಿಂಸೆ, ದ್ವೇಷ ಹರಡುತ್ತಿದ್ದಾರೆ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು.