ನವದೆಹಲಿ: ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ದಕ್ಷಿಣ ದೆಹಲಿ ಬಂಗಲೆಯಲ್ಲಿ ರಾಹುಲ್ ಗಾಂಧಿ ಬಾಡಿಗೆದಾರರಾಗಿ ತೆರಳುವ ಸಾಧ್ಯತೆ ಇದೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಶೀಲಾ ದೀಕ್ಷಿತ್ ವಾಸಿಸುತ್ತಿದ್ದ ಮನೆಗೆ ತೆರಳುವ ಸಾಧ್ಯತೆಯಿದೆ.
ಕಾಂಗ್ರೆಸ್ ಸಂಸದ ಸಂದೀಪ್ ದೀಕ್ಷಿತ್(ಶೀಲಾ ದೀಕ್ಷಿತ್ ಅವರ ಮಗ) ಪ್ರಸ್ತುತ ದಕ್ಷಿಣ ದೆಹಲಿ ಜಿಲ್ಲೆಯ ಬಿ2 ನಿಜಾಮುದ್ದೀನ್ ಪೂರ್ವದಲ್ಲಿರುವ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಭದ್ರತಾ ಏಜೆನ್ಸಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ) ಪಡೆದ ನಂತರ, ರಾಹುಲ್ ಅವರು ದಕ್ಷಿಣ ದೆಹಲಿಯಲ್ಲಿರುವ ದೀಕ್ಷಿತ್ ಅವರ ಮನೆಯ ಬಾಡಿಗೆದಾರರಾಗಿ ತೆರಳಲಿದ್ದಾರೆ ಎಂದು ಹೇಳಲಾಗಿದೆ.
ರಾಹುಲ್ ಗಾಂಧಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿರುವುದರಿಂದ ಭದ್ರತೆಗೆ ಅನುಮೋದನೆಯ ನಂತರವೇ ಮನೆಗೆ ಹೋಗುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರಾಹುಲ್ ಪ್ರಸ್ತುತ 10 ಜನಪಥ್ ನಲ್ಲಿ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ವಾಸಿಸುತ್ತಿದ್ದಾರೆ.