ರಾಹುಲ್ ಗಾಧಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಅವರನ್ನು ಆಧುನಿಕ ಜಿನ್ನಾ ಎಂದು ಕರೆದಿದ್ದಾರೆ. ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಕರೆದಿರುವ ರಾಹುಲ್ ಗಾಂಧಿ ದೇಹದೊಳಗೆ, ಜಿನ್ನಾ ಅವರ ಭೂತ ಹೊಕ್ಕಿರಬೇಕು ಎಂದಿದ್ದಾರೆ.
ಪಾಕಿಸ್ತಾನದ ಪ್ರದೇಶದೊಳಗೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿರುವುದಕ್ಕೆ ಪುರಾವೆ ಕೇಳುತ್ತಾರೆ. ಆದರೆ ನಾವೆಂದೂ ನೀವು ನಿಜವಾಗಿಯೂ ರಾಜೀವ್ ಗಾಂಧಿಯ ಮಗ ರಾಹುಲ್ ಹೌದೋ, ಅಲ್ಲವೋ ಎಂದು ಪುರಾವೆ ಕೇಳಿದ್ದೇವೆಯೇ ಎಂದಿದ್ದಾರೆ. ರಾಹುಲ್ ಗಾಂಧಿ ಭಾಷೆ ಮತ್ತು ಭಾಷಣ 1947ಕ್ಕಿಂತ ಹಿಂದಿನ ಜಿನ್ನಾ ಅವರಂತೆಯೇ ಇದೆ. ಒಂದು ರೀತಿಯಲ್ಲಿ ರಾಹುಲ್ ಗಾಂಧಿ ಆಧುನಿಕ ಜಿನ್ನಾ ರೀತಿ ವರ್ತಿಸುತ್ತಿದ್ದಾರೆ ಎಂದು ಶರ್ಮಾ ಕಿಡಿಕಾರಿದ್ದಾರೆ.
ಸೇನೆಯಿಂದ ದಾಳಿಯ ಪುರಾವೆ ಕೇಳುತ್ತಿದ್ದಾರೆ. ದಿವಂಗತ ಬಿಪಿನ್ ರಾವತ್ ಅವರ ನಾಯಕತ್ವದಲ್ಲಿ ಶತ್ರು ರಾಷ್ಟ್ರದ ಮೇಲೆ ಸರ್ಜಿಕಲ್ ದಾಳಿ ನಡೆಸಿ, ಯಶಸ್ವಿಯಾದ ನಮ್ಮ ಸೈನಿಕರ ಪರಾಕ್ರಮದ ಬಗ್ಗೆ ಸಂದೇಹವೇ ? ಬಿಪಿನ್ ರಾವತ್ ಅವರ ನಾಯಕತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲವಾ ? ಸೈನಿಕರ ಬಳಿ ಪುರಾವೆ ಕೇಳುತ್ತಾ ಅವರನ್ನ ಅವಮಾನ ಮಾಡುತ್ತಿದ್ದಾರೆ. ಎಷ್ಟೋ ಜನರು ನಮ್ಮ ದೇಶಕ್ಕಾಗಿ ಸಾಯುತ್ತಾರೆ, ಅಂತಾ ಸೈನ್ಯದಿಂದ ಪುರಾವೆ ಕೇಳುತ್ತಾರೆ ಎಂದು ಶರ್ಮಾ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿಯವರ ತಲೆಯಲ್ಲಿ “ತುಕ್ಡೆ-ತುಕ್ಡೆ” ಗುಂಪಿನ ಫಿಲಾಸಫಿ ತುಂಬಿಕೊಂಡಿದೆ. ಭಾರತವನ್ನು ರಾಜ್ಯಗಳ ಒಕ್ಕೂಟ ಎಂದಿರುವ ಅವರಿಗೆ, ಭಾರತವೆಂದರೆ ಗುಜರಾತ್‍ನಿಂದ ಪಶ್ಚಿಮ ಬಂಗಾಳದವರೆಗೆ ಮಾತ್ರ. ಕಳೆದ ಹತ್ತು ದಿನಗಳಿಂದ ಅವರು ಹೇಳುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಮ್ಮೆ ಅವರು ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದರೆ ಇನ್ನೊಂದು ಬಾರಿ ಭಾರತ ಎಂದರೆ ಗುಜರಾತಿನಿಂದ ಬಂಗಾಳದವರೆಗೆ ಎನ್ನುತ್ತಾರೆ. ಹೀಗಾಗಿ ರಾಹುಲ್ ಗಾಂಧಿಯಲ್ಲಿ ಜಿನ್ನಾ ಭೂತ ಪ್ರವೇಶಿಸಿದೆ ಎಂದಿದ್ದಾರೆ.