
ನೂತನ ಕೃಷಿ ಮಸೂದೆಯನ್ನ ವಿರೋಧಿಸಿ ಸಂಸದ ರಾಹುಲ್ ಗಾಂಧಿ ಸ್ವತಃ ತಾವೇ ಸಂಸತ್ತಿಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ನೂತನ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಮತ್ತೊಮ್ಮೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020, ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆ 2020 ಹಾಗೂ ರೈತರ (ಸಬಲೀಕರಣ ಹಾಗೂ ಸಂರಕ್ಷಣೆ) ಬೆಲೆಗಳ ಖಾತರಿ ಒಪ್ಪಂದದ ಭರವಸೆ ಹಾಗೂ ಕೃಷಿ ಸೇವೆಗಳ ಸುಗ್ರೀವಾಜ್ಞೆ 2020 ಇವು ಮೂರು ನೂತನ ಕೃಷಿ ಮಸೂದೆಗಳಗಾಗಿವೆ.
ಆದರೆ ಈ ಮಸೂದೆಗಳಿಂದ ಕೇಂದ್ರ ಸರ್ಕಾರವು ರಾಜ್ಯಗಳಿಂದ ಅಕ್ಕಿ ಹಾಗೂ ಗೋಧಿ ಖರೀದಿ ಮಾಡೋದನ್ನ ನಿಲ್ಲಿಸಿ ಬಿಡಬಹುದು. ಇದರಿಂದ ಬೆಳೆಯನ್ನು ಮಾರಾಟ ಮಾಡುವ ಸಂಪೂರ್ಣ ಹೊರೆ ರೈತರ ಮೇಲೆ ಬಂದುಬಿಡಬಹುದು. ಹಾಗೂ ಸರ್ಕಾರವು ಸಂಗ್ರಹ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಡಬಹುದು ಎಂದು ಆತಂಕ ರೈತರದ್ದಾಗಿದೆ.