ಬೆಂಗಳೂರು: ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದು ಎಐಸಿಸಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಇದೇ ವೇಳೆ ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿಯವರನ್ನು ಸಿದ್ಧರಾಮಯ್ಯ ಭೇಟಿಯಾಗಲಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಕೂಡ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಮಧ್ಯಾಹ್ನ 3 ಗಂಟೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಅವರೊಂದಿಗೆ ಭಾರತ ಜೋಡೋ ಯಾತ್ರೆ ಹೊರತಾಗಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ರಾಹುಲ್ ಗಾಂಧಿ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವಂತೆ ಒತ್ತಾಯಿಸಲಾಗಿದ್ದು, ಈಗಾಗಲೇ ವರಿಷ್ಠರ ಮುಂದೆ ವಾದ ಮಂಡಿಸಲಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸದಿದ್ದರೆ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲದಿದ್ದರೆ ಕೇವಲ ಶಾಸಕರಾಗಿ ಮಾಡುವುದು ಇನ್ನೇನಿದೆ ಎಂದು ಪಕ್ಷದ ಹೈಕಮಾಂಡ್ ಎದುರು ಸಿದ್ದರಾಮಯ್ಯನವರ ಬಣ ವಾದ ಮಂಡಿಸಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಪರಿಹಾರಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದು, ಗಾಂಧಿ ಕುಟುಂಬದ ಸೂಚನೆ ತಪ್ಪದೇ ಪಾಲಿಸುತ್ತೇನೆ ಎಂದು ಹೇಳಿದ್ದಾರೆನ್ನಲಾಗಿದೆ. ಚುನಾವಣೆಗೆ ಆರು ತಿಂಗಳು ಮೊದಲೇ ನಾಯಕತ್ವ ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಸ್ಥಳೀಯ ನಾಯಕರು ತೀವ್ರ ಒತ್ತಡ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಾದ ಕೃಷ್ಣಬೈರೇಗೌಡ ಮತ್ತು ಚೆಲುವರಾಯಸ್ವಾಮಿ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಒಂದಾಗಿಸಿದ ಬಳಿಕ ತಣ್ಣಗಾಗಿದ್ದ ಕಾಂಗ್ರೆಸ್ ಪಕ್ಷದ ಬಣಗಳ ನಡುವೆ ಮತ್ತೆ ತಿಕ್ಕಾಟ ನಡೆದಿದೆ.
ಈಗ ಘರ್ಷಣೆ ಇಲ್ಲದಿದ್ದರೂ ರಾಹುಲ್ ಗಾಂಧಿಯವರು ಮುಕ್ತವಾಗಿ ಚರ್ಚಿಸಲು ನಿರ್ಧರಿಸಿದ್ದಾರೆ. ಚುನಾವಣೆಗೆ ಮೊದಲೇ ಎಲ್ಲಾ ಗೊಂದಲವನ್ನು ನಿವಾರಿಸಲು ತಂತ್ರ ರೂಪಿಸಿದ್ದಾರೆ. ಇದಕ್ಕಾಗಿ ನಾಯಕರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.