
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಗುವಾಹಟಿಯ ಪಾನ್ ಬಜಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ಮತ್ತು ಆರ್.ಎಸ್.ಎಸ್. ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೂರು ನೀಡಲಾಗಿತ್ತು. ಬಿಜೆಪಿ, ಆರ್.ಎಸ್.ಎಸ್. ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ನಾವು ಈಗ ಬಿಜೆಪಿ, ಆರ್.ಎಸ್.ಎಸ್. ವಿರುದ್ಧ ಹೋರಾಡುತ್ತಿದ್ದೇವೆ ಕಾಂಗ್ರೆಸ್ ಕಚೇರಿ ಉದ್ಘಾಟನೆಯ ವೇಳೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಸಂಬಂಧಿಸಿದಂತೆ, ಗುವಾಹಟಿಯ ಪಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಭಾರತದ ಸಾರ್ವಭೌಮತ್ವ, ಏಕತೆ, ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕಾಯ್ದೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು ಎಂದು ಬಿಎನ್‌ಎಸ್‌ನ ಸೆಕ್ಷನ್ 152 ಮತ್ತು 197(1)ಡಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಇದು ಜಾಮೀನು ರಹಿತ ಅಪರಾಧವಾಗಿದೆ.
ದೂರುದಾರರಾದ ಮಂಜಿತ್ ಚೇಟಿಯಾ, ಗಾಂಧಿಯವರ ಹೇಳಿಕೆಯು ಅನುಮತಿಸಲಾದ ವಾಕ್ ಸ್ವಾತಂತ್ರ್ಯದ ಮಿತಿಗಳನ್ನು ಮೀರಿದೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ ಎಂದು ಆರೋಪಿಸಿದ್ದಾರೆ.