ನವದೆಹಲಿ: ಜೂನ್ 4ರಂದು ಭಾರತೀಯರ 30 ಲಕ್ಷ ಕೋಟಿ ರೂ. ನಷ್ಟವಾಗಿದೆ. ಪ್ರಧಾನಿ ಮೋದಿ ಎರಡು ಮೂರು ಸಲ ಸ್ಟಾಕ್ ಮಾರ್ಕೆಟ್ ಬಗ್ಗೆ ಹೇಳಿಕೆ ನೀಡಿದ್ದರು. ಬಿಜೆಪಿಯ ಮಾತು ನಂಬಿ ಜನ ಸಾವಿರಾರು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಹಂಗಾಮಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾನಿ ನೇತೃತ್ವದ ಎರಡು ಚಾನಲ್ ಗಳಿಗೆ ಮೋದಿ ಸಂದರ್ಶನ ನೀಡಿದ್ದರು. ಹೂಡಿಕೆ ಮಾಡಿದರೆ ಮಾರ್ಕೆಟ್ ಮೇಲೆ ಏಳುತ್ತದೆ ಎಂದು ಮೋದಿ ನಂಬಿಸಿದ್ದರಿಂದ ಮಾತು ನಂಬಿದ ಜನ ಸಾವಿರ ಕೋಟಿ ರೂ. ಹೂಡಿಕೆ ಮಾಡಿದ್ದರು ಎಂದು ಹೇಳಿದ್ದಾರೆ.
ಎಕ್ಸಿಟ್ ಪೋಲ್ ನ ಮಾನದಂಡವೇನು? ಯಾವ ಆದರದ ಮೇಲೆ ಎಕ್ಸಿಟ್ ಪೋಲ್ ಮಾಡಲಾಗಿದೆ ಎಂದು ಪ್ರಶ್ನಿಸಿದ ಅವರು ಷೇರು ಮಾರುಕಟ್ಟೆ ಹಗರಣ ಆದಾನಿಗೂ ಮೀರಿದ ಬಹುದೊಡ್ಡ ಹಗರಣ ಎಂದು ಆರೋಪಿಸಿದ್ದಾರೆ.
‘ಅತಿದೊಡ್ಡ ಷೇರು ಮಾರುಕಟ್ಟೆ ಹಗರಣ’ ಎಂದು ಕರೆದ ರಾಹುಲ್ ಗಾಂಧಿ, ಈ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಒತ್ತಾಯಿಸಿದ್ದಾರೆ.
ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಐದು ಕೋಟಿ ಕುಟುಂಬಗಳಿಗೆ ನಿರ್ದಿಷ್ಟ ಹೂಡಿಕೆ ಸಲಹೆಯನ್ನು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಏಕೆ ನೀಡಿದರು? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಒಂದೇ ಮಾಧ್ಯಮಕ್ಕೆ ಎರಡು ಸಂದರ್ಶನಗಳನ್ನು ಏಕೆ ನೀಡಲಾಗಿದೆ? ಎಕ್ಸಿಟ್ ಪೋಲ್‌ಗಳು ಪ್ರಕಟವಾಗುವ ಒಂದು ದಿನ ಮೊದಲು ಹೂಡಿಕೆ ಮಾಡಿದ ಮತ್ತು ಭಾರಿ ಲಾಭ ಗಳಿಸಿದ ಸಂಶಯಾಸ್ಪದ ವಿದೇಶಿ ಹೂಡಿಕೆದಾರರ ನಡುವಿನ ಸಂಬಂಧವೇನು? ಎಂದು ಪ್ರಶ್ನಿಸಿದ್ದಾರೆ.
ಇದೊಂದು ಹಗರಣ ಎಂಬುದು ನಮಗೆ ಮನವರಿಕೆಯಾಗಿದೆ. ಯಾರೋ ಭಾರತೀಯ ಚಿಲ್ಲರೆ ಹೂಡಿಕೆದಾರರ ವೆಚ್ಚದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮಾಡಿದ್ದಾರೆ ಮತ್ತು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಖರೀದಿಸುವ ಸೂಚನೆಯನ್ನು ನೀಡಿದ್ದಾರೆ. ಹಾಗಾಗಿ ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆ ನಡೆಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.