ಇಂದಿನ ಯುವ ಆಟಗಾರರಿಗೆ ನೇಮ್-ಫೇಮ್ ಸಿಕ್ಕರೆ ಸಾಕು, ಅವರನ್ನ ಕಂಟ್ರೋಲ್ ಮಾಡೋದೇ ಕಷ್ಟ. ಆದರೆ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತಿನ ಖ್ಯಾತ ಆಟಗಾರ. ಇವರು ತಮ್ಮ ಆಟ ಆಡುವ ವೈಖರಿಯಷ್ಟೇ ತಮ್ಮ ಸರಳತೆಗೂ ಪ್ರಸಿದ್ಧರಾದವರು. ಇಂದು ರಾಹುಲ್ ದ್ರಾವಿಡ್ ಇಂಡಿಯನ್ ಕ್ರಿಕೆಟ್ ಟೀಂನ ಮುಖ್ಯ ಕೋಚ್ ಆಗಿದ್ದರೂ, ಅವರ ವಿನಮ್ರತೆ, ಸರಳತೆಯ ವ್ಯಕ್ತಿತ್ವದಲ್ಲಿ ಚೂರು ಬದಲಾವಣೆ ಇಲ್ಲ. ರಾಹುಲ್ ಅವರ ಇದೇ ವ್ಯಕ್ತಿತ್ವಕ್ಕೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.
ಅದು ಮಾಜಿ ಕ್ರಿಕೆಟಿಗ ಜಿ. ಆರ್. ವಿಶ್ವನಾಥ್ ಅವರು, ತಮ್ಮ ಪುಸ್ತಕದ ಬಗ್ಗೆ ಮಾತನಾಡುವ ಕಾರ್ಯಕ್ರಮ. ಅದೇ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಅವರು ಸಹ ಆಗಮಿಸಿದ್ದರು. ಆಗ ತಮಗಾದ ಅನುಭವನ್ನೇ ಕಾಶಿಯವರು ತಮ್ಮ ಟ್ವಿಟರ್ ಅಕೌಂಟ್‌ಲ್ಲಿ ಬರೆದುಕೊಂಡಿದ್ದಾರೆ.
‘ರಾಹುಲ್ ದ್ರಾವಿಡ್, ಭಾರತ ಕಂಡ ಅದ್ಭುತ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಇವರು ಕೂಡಾ ಒಬ್ಬರು. ಇವರು ಮಾಜಿ ಕ್ರಿಕೆಟಿಗರಾದ ಜಿ.ಆರ್.ವಿಶ್ವನಾಥ್ ಅವರ ಪುಸ್ತಕದ ಕುರಿತಾದ ಕಾರ್ಯಕ್ರಮಕ್ಕೆ ಮಾಸ್ಕ್ ಧರಿಸಿಕೊಂಡು ಓರ್ವ ಕಾಮನ್ ಮ್ಯಾನ್‌ನಂತೆ ಬಂದಿದ್ದರು. ಅವರು ಬಂದ ರೀತಿ ನೋಡ್ತಿದ್ರೆ ನನಗಷ್ಟೆ ಅಲ್ಲ ಅಲ್ಲಿದ್ದವರಿಗೂ ಅವರು ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಂತ ಗೊತ್ತಾಗಲೇ ಇಲ್ಲ. ಅವರು ಅಲ್ಲೇ ಕೊನೆಯ ಸಾಲಿನಲ್ಲಿ ಇದ್ದ ಕುರ್ಚಿಯಲ್ಲಿ ಆರಾಮಾಗಿ ಕುಳಿತುಕೊಂಡರು. ಅವರ ಪಕ್ಕದಲ್ಲಿ ಕುಳಿತ ಹುಡುಗಿಗೂ ಗೊತ್ತಿರಲಿಕ್ಕಿಲ್ಲ ತಾನು ಎಂಥ ಮಹಾನ್ ಆಟಗಾರನ ಪಕ್ಕ ಕುಳಿತುಕೊಂಡಿದ್ದೇನೆ ಅಂತ ಎಂದಿದ್ದಾರೆ.
ಕೊನೆಗೆ ರಾಹುಲ್ ದ್ರಾವಿಡ್ ಅವರು ಕಾರ್ಯಕ್ರಮದ ನಡುವೆ ಮುಂದೆ ಬಂದು ಕುಳಿತರು. ನಂತರ ಕಾರ್ಯಕ್ರಮದ ಅಂತ್ಯದಲ್ಲಿ ಜಿ.ಆರ್. ವಿಶ್ವನಾಥ್ ಅವರು ರಾಹುಲ್ ಅವರಿಗೆ ಈ ಕಾರ್ಯಕ್ರಮದ ಕುರಿತು ಎರಡು ಮಾತು ಹೇಳಲು ಕೇಳಿಕೊಂಡಾಗ ರಾಹುಲ್ ವಿನಮ್ರವಾಗಿಯೇ ತಳ್ಳಿಹಾಕಿದರು. ಕೊನೆಗೆ ರಾಹುಲ್ ಅವರ ಆಟೋಗ್ರಾಫ್‌ಗಾಗಿ ಜನರ ನುಗ್ಗಾಟ ಶುರುವಾಯ್ತು. ರಾಹುಲ್ ನಿಲ್ಲೋದಕ್ಕೂ ಕಷ್ಟಪಡಬೇಕಾಯಿತು. ಆದರೂ ನಿಂತಲ್ಲಿಯೇ ಅವರು 50ಕ್ಕೂ ಹೆಚ್ಚು ಪುಸ್ತಕಗಳ ಮೇಲೆ ಹಸ್ತಾಕ್ಷರವನ್ನ ನೀಡಿದರು ಎಂದು ಹೇಳಿದ್ದಾರೆ.