ನವದೆಹಲಿ: ಪಡಿತರ ಚೀಟಿದಾರರಿಗೆ ರಾಷ್ಟ್ರಧ್ವಜವನ್ನು ಖರೀದಿಸುವಂತೆ ನ್ಯಾಯಬೆಲೆ ಅಂಗಡಿಯವರು ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯತೆ ಮಾರಾಟ ಮಾಡುತ್ತಿದೆ. ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ. ತ್ರಿವರ್ಣ ನಮ್ಮ ಹೆಮ್ಮೆ. ಅದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯತೆಯನ್ನು ಎಂದಿಗೂ ಮಾರಲು ಸಾಧ್ಯವಿಲ್ಲ. ಪಡಿತರ ನೀಡುವಾಗ ಬಡವರಿಗೆ ತ್ರಿವರ್ಣ ಧ್ವಜಕ್ಕಾಗಿ 20 ರೂ. ಕೊಡುವಂತೆ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ತ್ರಿವರ್ಣ ಧ್ವಜದ ಜೊತೆಗೆ, ಬಿಜೆಪಿ ಸರ್ಕಾರವು ನಮ್ಮ ದೇಶದ ಬಡವರ ಸ್ವಾಭಿಮಾನದ ಮೇಲೂ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೆಲವು ಪಡಿತರ ಚೀಟಿದಾರರು 20 ರೂ. ಪಾವತಿಸಿ ಧ್ವಜ ಖರೀದಿಸಲು ಬಲವಂತ ಮಾಡುತ್ತಿರುವುದನ್ನು ಹೇಳಿಕೊಂಡ ವಿಡಿಯೊ ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ, ಪಡಿತರ ಚೀಟಿದಾರರು ಪಡಿತರ ಪಡೆಯಲು ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಚರಣೆಗಳು ಬಡವರಿಗೆ ಹೊರೆಯಾದರೆ ಅದು ದುರದೃಷ್ಟಕರ ಎಂದರು.