ಬೆಂಗಳೂರು: ಪಡಿತರ ಅಕ್ಕಿಯನ್ನು ಶೇಕಡ 50 ರಷ್ಟು ಕಡಿತಗೊಳಿಸಲಾಗುವುದು. ಶೇ. 50 ರಷ್ಟು ರಾಗಿ, ಜೋಳ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ.
ಬಿಪಿಎಲ್ ಕಾರ್ಡ್ ದಾರರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಪೂರೈಕೆಯಾಗುತ್ತಿದ್ದು, ಅದರಲ್ಲಿ ಶೇಕಡ 50 ರಷ್ಟು ಕಡಿತಗೊಳಿಸಲಾಗುವುದು. ಬದಲಿಗೆ ರಾಗಿ ಇಲ್ಲವೇ ಜೋಳ ವಿತರಿಸಲು ಚಿಂತನೆ ನಡೆಸಲಾಗಿದೆ.
ಪಡಿತರ ಯೋಜನೆಯಡಿ ಕುಟುಂಬಗಳಿಗೆ ಆಹಾರ ಭದ್ರತೆ ಖಾತರಿಪಡಿಸಲು, ಪಡಿತರ ವ್ಯವಸ್ಥೆಗೆ ಬಲ ತುಂಬುವ ಮತ್ತು ಪೌಷ್ಟಿಕತೆ ಖಾತರಿಗಾಗಿ ಸಿರಿಧಾನ್ಯ ನೀಡಲು ಸರ್ಕಾರ ಮುಂದಾಗಿದೆ. ಅಲ್ಲದೇ, ಅನ್ನಭಾಗ್ಯದ ಅಕ್ಕಿ ದುರ್ಬಳಕೆ ದಂಧೆಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರ ಬೆಂಬಲ ನೀಡಿ ರಾಗಿ, ಜೋಳ ಖರೀದಿ ಮಾಡುತ್ತಿದೆ. ಇವುಗಳನ್ನು ಪಡಿತರದಲ್ಲಿ ವಿತರಿಸಲು ಸರ್ಕಾರ ಕ್ರಮಕೈಗೊಂಡಿದೆ. ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುತ್ತಿದ್ದು, ಕುಟುಂಬದಲ್ಲಿ 5 ಮಂದಿ ಸದಸ್ಯರಿದ್ದರೆ 50 ಕೆಜಿ ಅಕ್ಕಿ ಸಿಗುತ್ತದೆ. ಬಹುತೇಕ ಅಕ್ಕಿ ಕಾಳಸಂತೆ ಪಾಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಶೇಕಡ 50 ರಷ್ಟು ಕಡಿತ ಮಾಡಿ ರಾಗಿ ಇಲ್ಲವೇ ಜೋಳ ನೀಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.