ಬೆಂಗಳೂರು: ಸರ್ಜಾಪುರದ ಖಾಸಗಿ ಹೋಟೆಲ್ ಒಂದರಲ್ಲಿ ಭಾನುವಾರ ನಾಟಿ ಕೋಳಿ ಸಾರು, ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹರೀಶ್ ಬಹುಮಾನವಾಗಿ ಕುರಿ ಪಡೆದುಕೊಂಡಿದ್ದಾರೆ.
30 ನಿಮಿಷದಲ್ಲಿ 13 ರಾಗಿ ಮುದ್ದೆ ತಿಂದು ಮೊದಲ ಸ್ಥಾನ ಪಡೆದ ಮಹಾಲಕ್ಷ್ಮಿ ಲೇಔಟ್ ನಿವಾಸಿ ಹರೀಶ್ ಬಹುಮಾನವಾಗಿ ಕುರಿ ಪಡೆದುಕೊಂಡರು. ಮಾಲೂರು ತಾಲೂಕಿನ ಸಂಪಂಗೆರೆ ಗ್ರಾಮದ ಶ್ರೀನಿವಾಸ್ ಎರಡನೇ ಬಹುಮಾನ ಪಡೆದು ಎರಡು ನಾಟಿ ಕೋಳಿ ಹಾಗೂ ಮೂರನೇ ಸ್ಥಾನ ಪಡೆದ ಆನೇಕಲ್ ತಾಲೂಕಿನ ಇಟ್ಟಂಗೂರು ಗ್ರಾಮದ ಆನಂದ್ ಅವರಿಗೆ ಒಂದು ನಾಟಿ ಕೋಳಿ ನೀಡಲಾಗಿದೆ.
50ಕ್ಕೂ ಹೆಚ್ಚು ಸ್ಪರ್ಧಿಗಳು ನಾಟಿ ಕೋಳಿ ಸಾರು, ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ಆಯೋಜಕ ಎಸ್. ಮಹೇಶ್ ಮಾತನಾಡಿ, ದೇಸಿ ಆಹಾರ ಪದ್ಧತಿ ಮರೆಯಾಗುತ್ತಿದ್ದು, ಫಾಸ್ಟ್ ಫುಡ್ ಗೆ ಜನ ಮಾರುಹೋಗುತ್ತಿದ್ದಾರೆ. ಆರೋಗ್ಯಕರ ಜೀವನಕ್ಕೆ ದೇಸಿಯ ಆಹಾರ ಸೂಕ್ತವಾಗಿದೆ. ಹಳ್ಳಿ ಸೊಗಡು ನೆನಪಿಸಲು ನಾಟಿ ಕೋಳಿ ಮತ್ತು ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಿಗೆ ಎಸ್. ಮಹೇಶ್, ಜಗದೀಶ್, ಮುನಿರಾಜು, ದಿಲೀಪ್, ಜಗದೀಶ್ ನ್ಯಾನಪನಹಳ್ಳಿ ಬಹುಮಾನ ವಿತರಿಸಿದ್ದಾರೆ.