ಬೆಂಗಳೂರು: ಅಮೆರಿಕದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ನಟ ಶಿವರಾಜ್ ಕುಮಾರ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ಆಗಮನ ಹಿನ್ನೆಲೆಯಲ್ಲಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಹೋದರ ಹಾಗೂ ನಟ ರಾಘವೇಂದ್ರ ರಾಜಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೊನೆಗೂ ಈ ದಿನ ಬಂತು, ನನಗೆ ಅಪ್ಪಾಜಿ ಕಾಡಿನಿಂದ ವಾಪಸ್ ಬಂದಂತೆ ಆಯ್ತು, ಶಿವಣ್ಣನನ್ನು ನೋಡಿ ನಾನು ಅಪ್ಪಾಜಿಯನ್ನೇ ನೋಡಿದಂತಾಯಿತು. ನನ್ನ ಆಯಸ್ಸು ಕೂಡ ಶಿವಣ್ಣನವರಿಗೆ ಇರಲಿ ಎಂದು ರಾಘಣ್ಣ ಹೇಳಿದ್ದಾರೆ.
ಶಿವಣ್ಣ ಆರೋಗ್ಯವಾಗಿರುವ ವಿಷಯ ಗೊತ್ತಾದಾಗ ಖುಷಿಯಾಯಿತು. ಚಿಕಿತ್ಸೆಯ ಸಮಯದಲ್ಲೂ ಅವರೊಂದಿಗೆ ಸಾಕಷ್ಟು ಮಾತನಾಡಿದ್ದೇನೆ. ಶಿವಣ್ಣನಿಗೆ ಭಯವಿದ್ದರೂ ತೋರಿಸಿಕೊಳ್ಳಲಿಲ್ಲ. ಈಗ ಸಂಪೂರ್ಣ ಗುಣಮುಖರಾಗಿ ಆಗಮಿಸಿದ್ದಾರೆ. ಶಿವಣ್ಣನಿಗೆ ನಾವಷ್ಟೇ ಅಲ್ಲ, ಅಭಿಮಾನಿಗಳ ಶ್ರೀ ರಕ್ಷೆ ಇದೆ. ಹಳೆಯ ಶಿವರಾಜ್ ಕುಮಾರ್ ಇನ್ನು ಮುಂದೆ ಇರಲ್ಲ, ಇನ್ನೆರಡು ತಿಂಗಳು ನೋಡಿ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.