ಜಬಲ್‌ಪುರ: ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯೊಂದಿಗೆ ವಿದ್ಯಾರ್ಥಿಗಳು ಅನುಚಿತವಾಗಿ ವರ್ತಿಸಿದ್ದು, ಬೆತ್ತಲೆಯಾಗಿ ಪರೇಡ್ ಮಾಡಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸಂತ್ರಸ್ತನ ತಂದೆ ಮಧ್ಯಪ್ರದೇಶದ ಜಬಲ್ಪುರದ ಗ್ವಾರಿಘಾಟ್ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ದಾಖಲಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೊದಲು ಮೂವರು ಹುಡುಗರು ವಿದ್ಯಾರ್ಥಿಗೆ ರ್ಯಾಗಿಂಗ್ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಇಡೀ ತರಗತಿಯಲ್ಲಿ ಮೆರವಣಿಗೆ ಮಾಡಲಾಗಿದೆ. ತನ್ನ ಮಗ ಎಂದಿನಂತೆ ಅಂದು ಬೆಳಗ್ಗೆ ಶಾಲೆಗೆ ಹೋಗಿದ್ದ. ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ಇಡೀ ತರಗತಿಯ ಮುಂದೆಯೇ ಆತನನ್ನು ಥಳಿಸಿದ್ದಾರೆ. ಅವರು ಅನುಚಿತವಾಗಿ ವರ್ತಿಸಿ ಆತನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ ಎಂದು ಸಂತ್ರಸ್ತನ ತಂದೆ ದೂರು ನೀಡಿದ್ದಾರೆ.
ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದರೂ ಅವರು ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಅಥವಾ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿಲ್ಲ. ಈ ಘಟನೆಯ ನಂತರ ವಿದ್ಯಾರ್ಥಿ ಶಾಲೆಗೆ ಹೋಗಲು ತುಂಬಾ ಹೆದರುತ್ತಿದ್ದ. ಇದರೊಂದಿಗೆ ಇತರ ವಿದ್ಯಾರ್ಥಿನಿಯರನ್ನು ವಸ್ತ್ರಾಪಹರಣ ಮಾಡಿ ಅವಮಾನಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ ಕಮಲ್ ಮೌರ್ಯ ಮಾತನಾಡಿ, ಸಂತ್ರಸ್ತೆಯ ತಂದೆ ಲಿಖಿತ ದೂರು ನೀಡಿದ್ದಾರೆ. ಪೊಲೀಸರ ತಂಡ ಶಾಲೆಗೆ ತೆರಳಿ ಘಟನೆಯ ಸಂಪೂರ್ಣ ತನಿಖೆ ನಡೆಸುತ್ತಿದೆ. ಅಲ್ಲದೆ, ಆರೋಪಿ ವಿದ್ಯಾರ್ಥಿಗಳ ಪೋಷಕರನ್ನು ವಿಚಾರಣೆಗಾಗಿ ಸಂಪರ್ಕಿಸಲಾಗುತ್ತಿದೆ ಎಂದು ಹೇಳಿದ್ದಾರೆ.