
ಬೆಂಗಳೂರು: ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್, ಕಾರ್ಮಿಕರೊಬ್ಬರನ್ನು ಮನೆಗೆ ಕರೆದು ಕ್ಷಮೆಯಾಚಿಸುರ ಘಟನೆ ನಡೆದಿದೆ. ಸ್ವಾತಂತ್ರ್ಯೋತ್ಸವದ ದಿನದಂದು ರಚಿತಾ ರಾಮ್ ಕಾರ್ಮಿಕರಲ್ಲಿ ಕ್ಷಮೆ ಕೇಳಲು ಕಾರಣವೇನು? ಇಲ್ಲಿದೆ ಮಾಹಿತಿ.
ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಫ್ಲವರ್ ಶೋ ಕಾರ್ಯಕ್ರಮಕ್ಕೆ ಆಗಸ್ಟ್.14ರಂದು ತೆರಳಿದ್ದ ನಟಿ ರಚಿತಾ ರಾಮ್, ಕಾರ್ಯಕ್ರಮ ಮುಗಿಸಿ ವಾಪಸ್ ಆಗುತ್ತಿದ್ದಾಗ ರಚಿತಾ ರಾಮ್ ಅವರ ಕಾರಿನ ಚಾಲಕನ ನಿರ್ಲಕ್ಷದಿಂದಾಗಿ ಕಾರ್ಮಿಕನೊಬ್ಬನಿಗೆ ಕಾರು ಗುದ್ದಿತ್ತು. ಆದರೂ ಕಾರು ಚಾಲಕನಾಗಲಿ, ರಚಿತಾ ರಾಮ್ ಆಗಲಿ, ಸೌಜನ್ಯಕ್ಕೂ ಕಾರು ನಿಲ್ಲಿಸಿ ಕಾರ್ಮಿಕನನ್ನು ವಿಚಾರಿಸದೇ ತೆರಳಿದ್ದು ಸಾರ್ವಜನಿಕರ ಹಾಗೂ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಇಂದು ರಚಿತಾ ರಾಮ್, ನಿನ್ನೆ ಲಾಲ್ ಬಾಗ್ ನಲ್ಲಿ ತಮ್ಮ ಕಾರು ಆಕಸ್ಮಿಕವಾಗಿ ಗುದ್ದಿದ್ದ ಕಾರ್ಮಿಕ ರಂಗಪ್ಪನನ್ನು ತಮ್ಮ ಮನೆಗೆ ಕರೆಸಿ ಕ್ಷಮೆ ಕೋರಿದ್ದಾರೆ. ತಪ್ಪಾಯ್ತು ಅಣ್ಣ, ಆಕಸ್ಮಿಕವಾಗಿ ನಡೆದ ಘಟನೆ…ಕ್ಷಮಿಸಿಬಿಡಿ ಎಂದು ಕ್ಷಮೆಯಾಚಿಸಿದ್ದರೆ. ನಿನ್ನೆ ಈ ಘಟನೆ ನಡೆದಾಗ ನನ್ನ ಗಮನಕ್ಕೆ ಬರಲಿಲ್ಲ. ವಿಷಯ ಗೊತ್ತಾದ ಬಳಿಕ ಕಾರ್ಮಿಕನನ್ನು ಮನೆಗೆ ಕರೆದು ಕ್ಷಮೆ ಕೋರುತ್ತಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಈ ಘಟನೆಯಿಂದ ಕಾರ್ಮಿಕರಿಗೆ ನೋವಾಗಿದ್ದರೆ ನನ್ನ ಕಾರು ಚಾಲಕನ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ಸ್ವಾತಂತ್ರ್ಯೋತ್ಸವದ ಇಂದಿನ ಇಡೀ ದಿನವನ್ನು ಕಾರ್ಮಿಕ ರಂಗಪ್ಪನಿಗಾಗಿ ಕಳೆಯುವುದಾಗಿ ತಿಳಿಸಿದ್ದಾರೆ.