
ನವದೆಹಲಿ: ಅರವಿಂದ್ ಕೇಜ್ರಿವಾಲ್ ಸಂಪುಟದ ಸಮಾಜ ಕಲ್ಯಾಣ ಸಚಿವರಾಗಿದ್ದ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ ರಾಜ್ ಕುಮಾರ್ ಆನಂದ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರು ಪಟೇಲ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 21 ರಂದು ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿದ ನಂತರ ಅರವಿಂದ್ ಕೇಜ್ರಿವಾಲ್ ಸರ್ಕಾರದಿಂದ ಇದು ಮೊದಲ ರಾಜೀನಾಮೆಯಾಗಿದೆ.
ಅವರು 2020 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಟೇಲ್ ನಗರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರವೇಶ್ ರತ್ನ ಅವರನ್ನು 30,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಅವರು ನವೆಂಬರ್ 2022 ರಲ್ಲಿ ದೆಹಲಿ ಕ್ಯಾಬಿನೆಟ್ ಮಂತ್ರಿಯಾದರು. ಅವರು ಕಾರ್ಮಿಕ ಮತ್ತು ಉದ್ಯೋಗ, SC ಮತ್ತು ST, ಭೂಮಿ ಮತ್ತು ಕಟ್ಟಡ, ಸಹಕಾರ ಮತ್ತು ಗುರುದ್ವಾರ ಚುನಾವಣಾ ಇಲಾಖೆಗಳ ಹೆಚ್ಚುವರಿ ಉಸ್ತುವಾರಿಯನ್ನು ಹೊಂದಿದ್ದರು.
ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಆನಂದ್, ಎಎಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮತ್ತು ನಾನು ಭ್ರಷ್ಟರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಇಂದು ರಾಜಕೀಯ ಬದಲಾಗಿಲ್ಲ ಆದರೆ ರಾಜಕಾರಣಿ ಬದಲಾಗಿದ್ದಾರೆ, ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾರೆ.