ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಕುರಿತಾದ ಅಸಮಾಧಾನ ಮುಂದುವರೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನಿತ ಸಚಿವರು, ಶಾಸಕರ ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ.
ಈಗ ಮತ್ತೊಬ್ಬ ಶಾಶಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ಸರ್ಕಾರ ಬರಲು ನಾನು ಕೂಡ ಕಾರಣ ಎಂದು ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಅವರು, ನಮ್ಮಲ್ಲಿ ಒಗ್ಗಟ್ಟು ಇದೆಯೋ ಇಲ್ಲವೋ ಎನ್ನುವುದು ಬೇರೆ ವಿಚಾರ. ನಾನು ಅಂದು ಪಕ್ಷೇತರ ಶಾಸಕ. ಈಗಲೂ ಪ್ರತ್ಯೇಕವಾಗಿ ಇದ್ದೇನೆ. ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದರೂ ಅಸಮಾಧಾನವಾಗಿದೆ. ಆದರೆ, ನನಗೆ ಸಚಿವ ಸ್ಥಾನವೇ ಸಿಕ್ಕಿಲ್ಲ. ಆನಂದ್ ಸಿಂಗ್ ಅವರ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಈಗಾಗಲೇ ಬಿ.ಎಸ್.ವೈ. ಭೇಟಿ ಮಾಡಿರುವ ಸಚಿವ ಆನಂದ್ ಸಿಂಗ್ ಸಂಜೆ ನಂತರ ಸಿಎಂ ಬೊಮ್ಮಾಯಿ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಕೆಲವರು ದೆಹಲಿಗೆ ದೌಡಾಯಿಸಿ ಲಾಬಿ ನಡೆಸಿದ್ದಾರೆ. ಮತ್ತೆ ಕೆಲವರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಬಲಿಗರ ಪ್ರತಿಭಟನೆಗಳೂ ನಡೆದಿವೆ. ಹೀಗೆ ಸಚಿವ ಸ್ಥಾನಾಕಾಂಕ್ಷಿಗಳು, ಖಾತೆ ಹಂಚಿಕೆ ಬಗ್ಗೆ ಅಸಮಾಧಾನಗೊಂಡವರ ಮನವೊಲಿಸಲು ಬೊಮ್ಮಾಯಿ ಪ್ರಯತ್ನ ಮುಂದುವರೆಸುವ ಜೊತೆಗೆ ಯಡಿಯೂರಪ್ಪ ಮೊರೆ ಹೋಗಿದ್ದಾರೆ. ಹೈಕಮಾಂಡ್ ಭೇಟಿ ಕೂಡ ಮಾಡಲಿದ್ದಾರೆ ಎನ್ನಲಾಗಿದೆ.