ಬೆಳಗಾವಿ: ಬರ ಪರಿಹಾರ ನೆರವು ಬಿಡುಗಡೆ ವಿಚಾರವಾಗಿ ಕಾಲಾಹರಣ ಮಾಡುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರಕಾರ ದಿವಾಳಿ ಆಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಬರಗಾಲ ಕುರಿತ ವಿಶೇಷ ಚೆರ್ಚೆ ವೇಳೆ ಮಾತನಾಡಿದ ಆರ್.ಅಶೋಕ್, ಸರ್ಕಾರಕ್ಕೆ ತೆಲಂಗಾಣ ಚುನಾವಣೆಯಲ್ಲಿ ಇರುವ ಆಸಕ್ತಿ ಬರಪರಿಸ್ಥಿತಿ ನಿಭಾಯಿಸುವ ವಿಷಯದಲ್ಲಿ ಇಲ್ಲ. ಅನೇಕ ಸಚಿವರು ಇನ್ನೂ ಹೈದರಾಬಾದ್ ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಹದಿನಾಲ್ಕು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ನಮ್ಮ ನಿರೀಕ್ಷೆ ತಲೆಕೆಳಗಾಗಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರ ಆರ್ಥಿಕ ಚಾಣಾಕ್ಷತೆ ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವುದರಲ್ಲೇ ಹೆಚ್ಚು ಸಾಧನೆ ಮಾಡಿದೆ. ಗ್ಯಾರೆಂಟಿ ಹೆಸರಿನಲ್ಲಿ ಕೊಟ್ಟು ಹಾಲಿನಿಂದ ಆಲ್ಕೊಹಾಲ್ ವರೆಗೆ, ಮಾರ್ಗಸೂಚಿ ದರ ಸೇರಿದಂತೆ ಎಲ್ಲದರ ಮೇಲೂ ಹೆಚ್ಚಳದ ಬರೆ ಹಾಕಿದ್ದಾರೆ. ಮತ್ತೆ ಈಗ ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸಿದ್ಧತೆ ನಡೆಸಿದ್ದಾರೆ. ಸರ್ಕಾರ ದಿವಾಳಿಯಾಗಿರುವ ಅನುಮಾನವಿದೆ, ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾದಲಿ ಎಂದು ಆಗ್ರಹಿಸಿದರು.
ಬರಗಾಲ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಬೆಳೆಗಾರರ ಎರಡು ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಬೇಕು, ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ ಪರಮಾಧಿಕಾರ ನೀಡಿ ಪ್ರತಿ ತಾಲ್ಲೂಕಿಗೆ ಐದು ಕೋಟಿ ರೂ. ನೀಡಬೇಕು. ಸ್ಥಗಿತಗೊಳಿಸಿರುವ ವಿದ್ಯಾನಿಧಿ ಯೋಜನೆ ಮತ್ತೆ ಆರಂಭಿಸಬೇಕು, ಕುಡಿಯುವ ನೀರು, ಮೇವು ಖರೀದಿ, ಗೋಶಾಲೆ ಆರಂಭಿಸಲು ಅನುದಾನ ನಿಗದಿ ಮಾಡಿ ಆದೇಶಗಳನ್ನು ತಕ್ಷಣವೇ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಬರಗಾಲದ ವೇಳೆ ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು, ಜಾನುವಾರುಗಳಿಗೆ ಬರಗಾಲದಲ್ಲಿ ಬರಬಹುದಾದ ಕಾಯಿಲೆಗಳಿಂದ ರಕ್ಷಿಸಲು ಲಸಿಕೆ ಹಾಕಬೇಕು ಎಂದರು.