
ಬೆಂಗಳೂರು: ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದ ವಿಚಾರ ಈಗ ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ವಾಕ್ಪ್ರಹಾರ ನಡೆಸಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಸಚಿವವರು ಹಾಗೂ ಶಾಸಕರ ನಡುವಿನ ಜಟಾಪಟಿಗೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಚಿವರ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಸಿಎಂ ಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ನಲ್ಲಿ ಯಾವಾಗ ಬೆಂಕಿ ಹೊತ್ತಿ ಉರಿಯುತ್ತೋ ಗೊತ್ತಿಲ್ಲ. ಅವರು ಹೇಗಾದರೂ ಕಿತ್ತಾಡಲಿ ನಮಗೆ ರಾಜ್ಯದ ಜನರ ಹಿತ ಮುಖ್ಯ. ಬಿ.ಆರ್.ಪಾಟೀಲ್ ಕೊನೇ ಹಂತಕ್ಕೆ ಬಂದಿದ್ದಾರೆ ಎಂದು ತಿಳಿದಿದೆ. ಬಿ.ಆರ್.ಪಾಟೀಲ್ ಸಿಎಂ ಗೆ ಬರೆದ ಪತ್ರದ ಬಗ್ಗೆ ಸದನದಲ್ಲಿ ಚರ್ಚೆಯಾಗುತ್ತೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಬಿಜೆಪಿ-ಜೆಡಿಎಸ್ ನಾಯಕರು ಕೂತು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಕರು ದಂಗೆ ಎದ್ದಿದ್ದಾರೆ. ನಾವು ಇದನ್ನು ಮೊದಲಿನಿಂದಲೂ ಹೇಳುತ್ತಿದ್ದೇವೆ. ಬಿ.ಆರ್.ಪಾಟೀಲ್ ಈಗ ಎರಡನೇ ಬಾರಿ ಪತ್ರ ಬರೆದಿದ್ದಾರೆ. ಬಿ.ಆರ್.ಪಾಟೀಲ್ ರಂತ ಧೈರ್ಯವಂತರು ಬಹಿರಂಗವಾಗಿ ಮಾತನಾಡಿದ್ದಾರೆ. ಉಳಿದವರು ಹೆದರಿ ಕುಳಿತಿದ್ದಾರೆ. ಮಂತ್ರಿಗಳು ಹೆದರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.