ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿ, 187 ಕೋಟಿ ರೂ. ಲೂಟಿ ಮಾಡಲಾಗಿದೆ. ತಮ್ಮ ಕಣ್ಣಿನ ಕೆಳಗೆ ಇವೆಲ್ಲ ನಡೆಯುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮೂಕ ಪ್ರೇಕ್ಷಕರಂತೆ ನಿಂತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ, ಮೃತ ಪಿ.ಚಂದ್ರಶೇಖರನ್ ಅವರ ಕುಟುಂಬ ಸಂಕಷ್ಟದಲ್ಲಿದೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದರೂ, ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ, ಇಲಾಖೆಯಿಂದ ಎಲ್ಲ ಮಾಹಿತಿ ಪಡೆದಿದ್ದರೂ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಮಾತ್ರ ಪಡೆಯುತ್ತಿಲ್ಲ. ಸರ್ಕಾರದ ಹಣವನ್ನು ಯಾರು ಹೇಗೆ ಬೇಕಾದರೂ ವರ್ಗಾವಣೆ ಮಾಡಬಹುದು ಎನ್ನುವಂತಾಗಿದೆ. ಈ ಹಣದಲ್ಲಿ ಸೋನಿಯಾ ಗಾಂಧಿ ಅವರಿಗೂ ಪಾಲು ಸಿಕ್ಕಿದೆ ಎಂಬ ಅನುಮಾನವಿದೆ ಎಂದು ಆರೋಪಿಸಿದ್ದಾರೆ.
ಆಂಧ್ರಪ್ರದೇಶದ ಜ್ಯುಬಿಲಿ ಹಿಲ್ಸ್ ಬ್ಯಾಂಕ್‌ಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಜೊತೆಗೆ 9 ಐಟಿ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಈ ಹಣವನ್ನು ದಲಿತರ ಶ್ರೇಯಸ್ಸಿಗಾಗಿ ಇಡಲಾಗಿತ್ತು. ಇಂತಹ ಹಣವನ್ನೇ ಕಾಂಗ್ರೆಸ್‌ನವರು ಲೂಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಲೂಟಿಯನ್ನು ತಡೆದವರು ನಿವೃತ್ತರಾಗಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.
ಈ ಹಗರಣ ದೆಹಲಿಯನ್ನು ತಲುಪಿದ್ದು, ಮುಂದೆ ದೆಹಲಿ ನಾಯಕರ ವಿಚಾರವೂ ಬಹಿರಂಗವಾಗಲಿದೆ. ಮಹಿಳೆಯರ ಅಕೌಂಟ್‌ಗೆ ಟಕಾಟಕ್ ಎಂದು ಹಣ ವರ್ಗಾವಣೆಯಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ ಇಲ್ಲಿ ಐಟಿ ಕಂಪನಿಗಳ ಖಾತೆಗೆ ಟಕಾಟಕ್ ಎಂದು ಹಣ ವರ್ಗಾವಣೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.