ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮನ್ನು ಯಾವ ಕಾರಣಕ್ಕೆ ಜನರು ನಂಬಬೇಕು? ನೀವು ನಂಬಿಕೆಯನ್ನೇ ಕಳೆದುಕೊಂಡಿರುವ ಸಿಎಂ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರೈತರ ಜಮೀನಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ವಿಚಾರವಾಗಿ ಸರ್ಕಾರದ ವಿರುದ್ಧ ಬಿಜೆಪಿ ಇಂದಿನಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ್, ವಕ್ಫ್ ಬೋರ್ಡ್ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಶಾಮೀಲಾಗಿದ್ದಾರೆ. ರೈತರ ಭೂಮಿಗೆ ವಕ್ಫ್ ನೋಟೀಸ್ ನೀಡುವ ಮೂಲಕ ರೈತರನ್ನು ಕನ್ವರ್ಟ್ ಮಾಡುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ವಕ್ಫ್ ಬೋರ್ಡ್ ಎನ್ನುವುದೇ ಸಾಬ್ರ ಬೋರ್ಡ್ ಆಗಿಬಿಟ್ಟಿದೆ. ಆದಿಶ್ ಶಾಹಿ, ಔರಂಗಜೇಬ್, ಬಾಬರ್ ಬೋರ್ಡ್ ಆಗಿದೆ. ಜಮೀನು, ಶಾಲೆ ದೇವಸ್ಥಾನ ವಕ್ಫ್ ಬೋರ್ಡ್ ಹೆಸರಿಗೆ ಆಗಿದೆ. ರಾಜ್ಯದಲ್ಲಿ ಲವ್ ಜಿಹಾದ್ ಆಯ್ತು, ಈಗ ಲ್ಯಾಂಡ್ ಜಿಹಾದ್ ಆರಂಭವಾಗಿದೆ. ಲ್ಯಾಂಡ್ ಜಿಹಾದ್ ಮೂಲಕ ರೈತರನ್ನು ಕನ್ವರ್ಟ್ ಮಾಡುವ ಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯನವರು ಜನರ ನಂಬಿಕೆ ಉಳಿಸಿಕೊಂಡಿಲ್ಲ. ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಸೂಚಿಸಿದ್ದೇವೆ ಎಂದಿದ್ದಾರೆ. ಕೇವಲ ನೋಟಿಸ್ ಹಿಂಪಡೆದರೆಸಾಲದು ಪಹಣಿಯಲ್ಲಿ ವಕ್ಫ್ ಎಂದು ಆಗಿರುವ ನೋಂದಣಿ ಬದಲಾಗಬೇಕು ಎಂದು ಆಗ್ರಹಿಸಿದರು.