alex Certify ಸಿಎಂ ರಾಜೀನಾಮೆ ನೀಡದೆ ಕುರ್ಚಿಗೆ ಅಂಟಿಕೊಂಡು ಕುಳಿತರೆ ಅವರ 40 ವರ್ಷಗಳ ರಾಜಕೀಯ ಬದುಕಿಗೆ, ರಾಜ್ಯದ ಜನತೆಗೆ ಮಾಡುವ ಅಪಮಾನ: ಆರ್.ಅಶೋಕ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ರಾಜೀನಾಮೆ ನೀಡದೆ ಕುರ್ಚಿಗೆ ಅಂಟಿಕೊಂಡು ಕುಳಿತರೆ ಅವರ 40 ವರ್ಷಗಳ ರಾಜಕೀಯ ಬದುಕಿಗೆ, ರಾಜ್ಯದ ಜನತೆಗೆ ಮಾಡುವ ಅಪಮಾನ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೈಕೋರ್ಟ್‌ನ ತೀರ್ಪು ಸ್ವಾಗತಾರ್ಹ. 40 ವರ್ಷದಿಂದ ಕಪ್ಪು ಚುಕ್ಕೆ ಇಲ್ಲವೆಂದು ಎದೆ ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಲಾದರೂ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಮುಡಾ ಹಗರಣ ಸಂಬಂಧ ತನಿಖೆಗೆ ಆದೇಶ ನೀಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದ ಹೈಕೋರ್ಟ್‌‌ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಇದು ಸತ್ಯಕ್ಕೆ ಹಾಗೂ ಬಿಜೆಪಿಯ ಹೋರಾಟಕ್ಕೆ ಸಿಕ್ಕಿರುವ ಜಯ. ಈಗಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ. ಸಿದ್ದರಾಮಯ್ಯನವರು ನನ್ನ ಬದುಕು ತೆರೆದ ಪುಸ್ತಕ, ಕಪ್ಪು ಚುಕ್ಕೆ ಇಲ್ಲ ಎಂದೆಲ್ಲ ಹೇಳಿಕೊಂಡಿದ್ದರು. ಇಷ್ಟೆಲ್ಲ ಆದ ನಂತರವೂ ಅವರು ರಾಜೀನಾಮೆ ನೀಡದೆ ಕುರ್ಚಿಗೆ ಅಂಟಿಕೊಂಡು ಕುಳಿತರೆ ಅದು ಅವರೇ ಹೇಳಿಕೊಳ್ಳುವ 40 ವರ್ಷಗಳ ರಾಜಕೀಯ ಬದುಕಿಗೆ ಹಾಗೂ ರಾಜ್ಯದ ಜನರಿಗೆ ಮಾಡುವ ಅಪಮಾನವಾಗುತ್ತದೆ. ಆದ್ದರಿಂದ ಕೂಡಲೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಹಿಂದಿನ ಅವಧಿಯಲ್ಲಿ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಸಂತೋಷ್‌ ಲಾಡ್‌ ವಿರುದ್ಧ ಆರೋಪ ಕೇಳಿಬಂದಾಗ ಕೂಡಲೇ ರಾಜೀನಾಮೆ ಪಡೆಯಲಾಗಿತ್ತು. ಈ ಅವಧಿಯಲ್ಲಿ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರಿಗೆ ಒಂದು ಕಾನೂನು, ನನಗೆ ಒಂದು ಕಾನೂನು ಎಂಬ ಧೋರಣೆ ಸಿಎಂ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿದೆ. ಕಾನೂನು ಹಾಗೂ ನೈತಿಕತೆ ಎಲ್ಲರಿಗೂ ಒಂದೇ ಆಗಿದ್ದು, ಆ ದೃಷ್ಟಿಯಿಂದಾದರೂ ರಾಜೀನಾಮೆ ನೀಡಲಿ ಎಂದರು.

ನಾನೊಬ್ಬ ಸಂವಿಧಾನ ತಜ್ಞ, ಕಾನೂನು ತಜ್ಞ ಎಂದು ಹೇಳಿಕೊಳ್ಳುವ ಲಾಯರ್ ಸಿದ್ದರಾಮಯ್ಯ ರವರಿಗೆ ಕಾನೂನಿನ ಮೇಲೆ, ಸಂವಿಧಾನದ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ, ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು

ನಾನು ರಾಮಕೃಷ್ಣ ಹೆಗಡೆಯವರ ಶಿಷ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ರಾಮಕೃಷ್ಣ ಹೆಗಡೆ ಆರೋಪ ಬಂದಾಗಲೇ ರಾಜೀನಾಮೆ ನೀಡಿದ್ದರು. ಈಗ ಕೋರ್ಟ್‌ ಆದೇಶ ಬಂದಿರುವುದರಿಂದ ಇವರು ಕೂಡ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಸತ್ಯಮೇವ ಜಯತೇ ಎಂಬ ಮಾತು ನಿಜ. ಮುಡಾ ಹಗರಣ ಸಂಬಂಧ ತನಿಖೆಗಾಗಿ ಆಗ್ರಹಿಸಿ ವಿಧಾನಸೌಧದಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಮಾಡಲಾಗಿತ್ತು. ಈ ವಿಷಯವನ್ನು ಪ್ರಸ್ತಾಪ ಮಾಡಲು ಕೂಡ ಸರ್ಕಾರ ಅವಕಾಶ ಕೊಟ್ಟಿರಲಿಲ್ಲ. ಪ್ರಜಾಪ್ರಭುತ್ವದ ವೇದಿಕೆಯಲ್ಲಿ ಚರ್ಚೆ ಮಾಡದೆ ಸಿಎಂ ಸಿದ್ದರಾಮಯ್ಯ ಓಡಿ ಹೋದಾಗಲೇ ಏನೋ ತಪ್ಪಾಗಿದೆ ಎಂಬುದು ಸ್ಪಷ್ಟವಾಗಿತ್ತು. ನಂತರ ಬಿಜೆಪಿ ಪಾದಯಾತ್ರೆ ಹೋರಾಟ ಮಾಡಿದೆ. ಪ್ರತಿ ದಾಖಲೆಗಳನ್ನು ಬಿಡುಗಡೆ ಮಾಡಿ ಜನರಿಗೆ ಈ ಕುರಿತು ತಿಳಿಸಲಾಗಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಜಯ, ಕಾಂಗ್ರೆಸ್‌ ಸರ್ಕಾರಕ್ಕೆ ಹಿನ್ನಡೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...