ಬೆಂಗಳೂರು: ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಿದ್ದೆಯಲ್ಲಿರುವ ಫೋಟೋ ಹಾಕಿ ಅಧಿಕಾರಕ್ಕೆ ಬಂದು 7ತಿಂಗಳಾದರೂ ಸರ್ಕಾರ ಇನ್ನೂ ನಿದ್ರೆಯಲ್ಲಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ಗಾಢ ನಿದ್ರೆ, ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ ಎಂದು ಕೇಂದ್ರ ಸರ್ಕರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಿಎಂ ಟೀಕೆಗೆ ಇದೀಗ ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು ಇದೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚನ್ನಾಗಿಯೇ ಸಿದ್ಧಿಸಿದೆ. ಜನ ನಿಮ್ಮನ್ನು ಮುಂದೆ ನಿದ್ರೆಗೆ ಬ್ರ್ಯಾಂಡ್ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಯಾವುದೇ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಿದ್ದೆ ಮಾಡುತ್ತಿರುವ ಒಂದು ದಾಖಲೆ ಕೊಡಿ. ಆದರೆ ಸಿದ್ದರಾಮಯ್ಯನವರು ನಿದ್ರೆ ಮಾಡುತ್ತಿರುವುದಕ್ಕೆ ಹಲವು ಸಾಕ್ಷಿಗಳಿವೆ. ಇತರರು ಬಂದು ಎದ್ದೇಳಣ್ಣ ಸಿದ್ರಾಮಣ್ಣ ಎಂದು ಎಚ್ಚರಿಸಿದ್ದಾರೆ. ಪ್ರಧಾನಿ ಮೋದಿ ಅತಿ ಹೆಚ್ಚು ಅವಧಿ ಕೆಲಸ ಮಾಡುತ್ತಾರೆ. ಆದರೆ ನೀವು 5 ತಾಸು ಕೂಡ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿದ್ದೆರಾಮಯ್ಯ ಎಂತಾನೇ ನಿಮಗೆ ಹೆಸರಿದೆ. ನಿದ್ದೆ ಮಾಡುವುದಕ್ಕೆ ನೀವೇ ಬ್ರ್ಯಾಂಡ್ ಅಂಬಾಸಿಡರ್. ಜನ ಮುಂದೆ ನಿಮ್ಮನ್ನು ನಿದ್ದೆಗೆ ಬ್ರಾಂಡ್ ಮಾಡುತ್ತಾರೆ ನೋಡಿ ಎಂದು ಟಾಂಗ್ ನೀಡಿದ್ದಾರೆ.