ಬೆಂಗಳೂರು: ರಾಜ್ಯದ ಎಲ್ಲಾ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಹಾಕಲಾಗಿದ್ದ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬ ಘೋಷವಾಕ್ಯವನ್ನು ಬದಲಾಯಿಸಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಿಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಸೂಚಿಸಿದ್ದಾರೆ ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಈ ಕ್ರಮಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಮಣಿವಣ್ಣನ್ ಪ್ರಧಾನ ಕಾರ್ಯದರ್ಶಿಯಾಗಿ ಬದಲಾವಣೆಯಾಗಿದ್ದಾರೆ ಎಂದು ಪ್ರಪಂಚವೇ ಬದಲಾವಣೆಯಾಗಬೇಕು ಎಂಬ ಮನಸ್ಥಿತಿಯಲ್ಲಿದ್ದಾರೆ. ಕುವೆಂಪು ಘೋಷವಾಕ್ಯವನ್ನೇ ತೆಗೆದುಹಾಕುವಂತಹ ಕೆಟ್ಟ ಸಂಸ್ಕೃತಿ. ಇಡೀ ಸರ್ಕಾರವೇ ಇದರ ಹಿಂದೆ ಇದೆ ಎಂದು ಕಿಡಿಕಾರಿದ್ದಾರೆ.
ಕುವೆಂಪು ವೇದವಾಕ್ಯ ತೆಗೆದು ಮಣಿವಣ್ಣನ್ ವಾಕ್ಯ ಹಾಕಲಾಗಿದೆ. ಸರ್ಕಾರದ ಆದೇಶ ಎಲ್ಲಿದೆ? ಸಿಎಂ ಆದೇಶ ಎಲ್ಲಿದೆ? ಒಬ್ಬ ಪ್ರಧಾನ ಕಾರ್ಯದರ್ಶಿ ತನ್ನ ಮನಸ್ಸಿಗೆ ಬಂದಂತೆ ಬದಲಾವಣೆ ಮಾಡುತ್ತಾರೆ ಎಂದರೆ ಏನರ್ಥ? ಈಗ ವಿಧಾನಸೌಧದ ಮುಂದೆ ಸರ್ಕಾರದ ಕೆಲಸ ದೇವರ ಕೆಲಸ ಅಂತ ಇದೆ. ಯಾರೋ ಕಾರ್ಯದರ್ಶಿ ಬಂದು ಅದನ್ನು ಅಳಿಸಿ ಹಾಕಿ ಎಂದರೆ ಏನರ್ಥ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.