ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಗೆ ಮತಹಾಕುವ ಮೂಲಕ ಅಡ್ಡಮತದಾನ ಮಾಡಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಕೆಂಡಾಮಂಡಲರಾಗಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್ ಅಡ್ಡಮತದಾನ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಈ ರೀತಿ ಮಾಡುವ ಬದಲು ರಾಜೀನಾಮೆ ಕೊಡಬಹುದಿತ್ತಲ್ಲ. ಕೊನೆ ಕ್ಷಣದವರೆಗೂ ನಮ್ಮ ಜೊತೆ ಮಾತನಾಡಿದ್ದರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಎಂದಿದ್ದರು. ನಿನ್ನೆಯೂ ಕರೆ ಮಾಡಿ ಪಕ್ಷಕ್ಕೆ ದ್ರೋಹ ಬಗೆಯಲ್ಲ ಎಂದು ಹೇಳಿದ್ದರು. ಆದರೆ ಈಗ ಅಡ್ಡಮತದಾನ ಮಾಡಿದ್ದಾರೆ. ಪದೇ ಪದೇ ಪಕ್ಷಕ್ಕೆ ಮೋಸ ಮಾಡುವುದನ್ನು ಜನ ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಸೋಮಶೇಖರ್ ಅವರನ್ನು ಮಂತ್ರಿ ಮಾಡಿದ್ದೆವು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದೆವು. ಅಭಿವೃದ್ಧಿಗೆ ಹಣ ನೀಡಿಲ್ಲ ಅಂತಾರೆ. ಹಿಮ್ದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ. ಪಕ್ಷದ ಶಾಸಕರಾಗಿ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ. ಸೋಮಶೇಖರ್ ಇಂದು ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋಮಶೇಖರ್ ಸಿಎಂ ಸಿದ್ದರಾಮಯ್ಯ ಜೊತೆ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಇವರನ್ನು ಕ್ಷಮಿಸಲ್ಲ. ಹೀಗೆ ಮಾಡುವ ಬದಲು ರಾಜೀನಾಮೆ ಕೊಟ್ಟು ಮತಹಾಕಬಹುದಿತ್ತು. ಸೋಮಶೇಖರ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.