ಬೆಂಗಳೂರು: ಉಗ್ರಗಾಮಿ ಸಂಘಟನೆಗಳು ನಡೆಸುತ್ತಿರುವ ದುಷ್ಕೃತ್ಯಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ಸಹಾನುಭೂತಿ ಮನೋಭಾವ ತೋರುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶದ್ರೋಹ ಕೆಲಸ ಮಾಡುತ್ತಿರುವವರನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಜನವಿರೋಧಿ ಧೋರಣೆಯ ಈ ಸರಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಕಿಡಿಕಾರಿದರು.
ಫೆ.27ರಂದು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಯಿತು. ಇದುವರೆಗೂ ಒಬ್ಬನನ್ನು ಬಂಧಿಸಿಲ್ಲ. 25 ಮಂದಿ ಪ್ರವೇಶಕ್ಕೆ ಅನುಮತಿ ಪಡೆದಿದ್ದರೂ ನೂರಕ್ಕೂ ಹೆಚ್ಚು ಮಂದಿ ಒಳ ಪ್ರವೇಶಿಸಿದ್ದರು. ಇದಕ್ಕೆ ಅವಕಾಶ ನೀಡಿದ್ದು ಯಾರು? ಪೊಲೀಸರು ಇವರಿಗೆ ಅವಕಾಶ ಮಾಡಿಕೊಟ್ಟಿದ್ದು ಹೇಗೆ? ಸ್ಥಳದಲ್ಲಿ ಹಿರಿಯ ಅಧಿಕಾರಿ ಆದಿಯಾಗಿ ಇದ್ದ ಅನೇಕ ಪೊಲೀಸರು ಪಾಕ್ ಪರ ಘೋಷಣೆ ಕೂಗಿದಾಗ ಮೌನವಾಗಿದ್ದು ಅವರಿಗೆ ಹೊರ ಹೋಗಲು ಅವಕಾಶ ನೀಡಿದ್ದು ಯಾಕೆ? ಎಫ್ ಎಸ್ ಎಲ್ ವರದಿ ಬಂದರೂ ಇನ್ನೂ ಬಹಿರಂಗಪಡಿಸದೇ ಇರಲು ಕಾರಣವೇನು? ಎಂದು ಪ್ರಶ್ನಿಸಿದರು.
ಎಫ್‌ಎಸ್‌ಎಲ್ ನವರು ಪೊಲೀಸರು ನೀಡಿದ್ದ ವಿಡಿಯೋ ಚಿತ್ರೀಕರಣದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ನಿಜ ಎಂದು ವರದಿ ನೀಡಿದ್ದಾರೆ. ಈ ಬಗ್ಗೆ ಕೆಲ ಅಧಿಕಾರಿಗಳು ನನಗೂ ಹೇಳಿದ್ದಾರೆ. ಮಾಧ್ಯಮಗಳು ಅದನ್ನು ವರದಿ ಮಾಡಿವೆ. ಆದರೂ ಇನ್ನೂ ವರದಿ ಕೈ ಸೇರಿಲ್ಲ ಎಂದು ಸುಳ್ಳು ಹೇಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಎಫ್‌ಎಸ್‌ಎಲ್ ವರದಿ ಬಿಡುಗಡೆಗೆ ಅಡ್ಡಿ ಮಾಡುತ್ತಿರುವ ಶಕ್ತಿ ಯಾವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.