ಕೋಲಾರ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭಾಗಿಯಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಕೋಲಾರದಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಆರ್.ಅಶೋಕ್, ವಾಲ್ಮೀಕಿ ನಿಗದಲ್ಲಿ 187 ಕೋಟಿ ಹಗರಣವಾಗಿದೆ. ಬಿ.ನಾಗೇಂದ್ರಗೆ ಹೋಗಿದ್ದು 20% ಮಾತ್ರ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ & ಗ್ಯಾಂಗ್ 80% ಲೂಟಿ ಮಾಡಿದ್ದಾರೆ. ಈಗ ಒಂದು ವಿಕೆಟ್ ಮಾತ್ರ ಬಿದ್ದಿದೆ. ಇನ್ನೂ ನಾಲ್ಕು ವಿಕೆಟ್ ಗಳು ಬೀಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಕುರಿತು ಸದನದಲ್ಲೂ ಆಗ್ರಹಿಸುತ್ತೇವೆ. ಸಿಎಂ ರಾಜೀನಾಮೆ ನೀಡುವವರೆಗೂ ಹೋರಾಡುತ್ತೇವೆ ಎಂದರು.
ಒಕ್ಕಲಿಗ ಸ್ವಾಮೀಜಿಯವರು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೇಳಿದ್ದಾರೆ. ಸಿದ್ದರಾಮಯ್ಯ ಧರ್ಮಾತ್ಮ ಅಲ್ಲ ಎಂದೇ ಸ್ವಾಮೀಜಿ ಪರೋಕ್ಷವಾಗಿ ಹೇಳಿದ್ದರೂ, ಡಿ.ಕೆ.ಶಿವಕುಮಾರ್ ಮೌನವಾಗಿದ್ದರು. ಮಾನ ಮರ್ಯಾದೆ ಇದ್ದಿದ್ದರೆ ಸಿದ್ದರಾಮಯ್ಯ ವೇದಿಕೆಯಲ್ಲೇ ರಾಜೀನಾಮೆ ನೀಡಿ ಹೋಗಬೇಕಿತ್ತು ಎಂದರು.
ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾಟದಿಂದ ತಪ್ಪಿಸಿಕೊಳ್ಳಲು ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಸ್ವಾಮೀಜಿ ಕೈಯಲ್ಲಿ ಹೇಳಿಕೆ ಕೊಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.